ಜ್ಞಾನವನ್ನು ವಿಜ್ಞಾನದ ಸಾಗರಕ್ಕೆ ಸೇರಿಸಿಕೊಳ್ಳಬೇಕು : ಶ್ರೀನಿವಾಸ ಪೈ

ಪುತ್ತೂರು: ಪ್ರಾಥಮಿಕವಾಗಿರುವ ನಮ್ಮ ಜ್ಞಾನವನ್ನು ವಿಜ್ಞಾನವೆಂಬ ಮಹಾ ಸಾಗರಕ್ಕೆ ವಿಸ್ತರಿಸಬೇಕು. ಇದಕ್ಕೆ ಆಸಕ್ತಿ ಹಾಗೂ ಸತತ ಪರಿಶ್ರಮದ ಅಗತ್ಯವಿದೆ, ದೇಶದ ಅಭಿವೃದ್ಧಿಗೆ ವಿಜ್ಞಾನದ ಬೆಳವಣಿಗೆ ಅತೀ ಅವಶ್ಯಕ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ ಹೇಳಿದರು.

ಕಾಲೇಜಿನ ವತಿಯಿಂದ ಪುತ್ತೂರು ಹಾಗೂ ನೆರೆಯ ತಾಲೂಕುಗಳನ್ನು ಕೇಂದ್ರವಾಗಿಸಿಕೊಂಡು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಇನ್ ಡೆಪ್ತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಸರ್ಕಾರದಿಂದ ಸಾಕಷ್ಟು ಅನುದಾನವಿದ್ದರೂ ಮೂಲ ವಿಜ್ಞಾನಕ್ಕೆ ವಿದ್ಯಾರ್ಥಿಗಳ ಕೊರತೆಯಿದೆ ಎಂಬುವುದು ವಿಷಾದದ ಸಂಗತಿ. ಸ್ಪರ್ಧಾತ್ಮಕ ಯುಗದಲ್ಲಿ ವಿದೇಶಗಳು ದಾಪುಗಾಲು ಇಡುತ್ತಿರುವ ಸಂದರ್ಭದಲ್ಲಿ  ಈ ಕಾರ್ಯಕ್ರಮವು ಒಂದು ಪುಟ್ಟ ಅಳಿಲು ಸೇವೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಅಜ್ಞಾನದಿಂದ ವಿಜ್ಞಾನದೆಡೆಗೆ, ವಿಜ್ಞಾನದಿಂದ ಸುಜ್ಞಾನದೆಡೆಗೆ ನಮ್ಮ ಅರಿವು ಹರಿಯಲಿ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶೇಷ ವ್ಯಕ್ತಿತ್ವವಿರುತ್ತದೆ. ಅದು ಗುರಿಯನ್ನು ಆಯ್ದುಕೊಳ್ಳುವಲ್ಲಿ ಸಹಕರಿಸಿದಾಗ ಆಯ್ದ ಗುರಿ ಗೊಂದಲಗಳನ್ನು ನಿವಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿದರು. ಸಸ್ಯಶ್ರಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಶಿವಪ್ರಸಾದ್ ವಂದಿಸಿದರು. ನಿಶಾಭಾನು ಕಾರ್ಯಕ್ರಮ ನಿರೂಪಿಸಿದರು.