ವಿವೇಕಾನಂದದಲ್ಲಿ ಭಗವದ್ಗೀತ ಭಗವದರ್ಪಣಂ ಕಾರ್ಯಕ್ರಮ

ಪುತ್ತೂರು :   ಭಗವದ್ಗೀತೆ ಜಗತ್ತಿನಲ್ಲೆ ಅತ್ಯಂತ ಸಣ್ಣ ಧಾರ್ಮಿಕ ಗ್ರಂಥ ಎಂಬ ಪ್ರಶಂಸೆಗೆ ಪಾತ್ರವಾಗಿದೆ.  ಆದರೆ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತೆ, ಭಗವದ್ಗೀತೆಯಲ್ಲಿ ಅಡಕವಾಗಿರುವ ಜ್ಞಾನರಾಶಿ ಅಪಾರವಾದುದು ಎಂದು ಬೆಟ್ಟಂಪಾಡಿಯ ಸಂಸ್ಕೃತ ವಿದ್ವಾಂಸ ವೆಂಕಟರಮಣ ಭಟ್ ಮಂಜಳಗಿರಿ ನುಡಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ಸಂಘ ವಿಕಾಸಂ ನ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಶ್ರೀಮದ್ಭಗವದ್ಗೀತ ಭಗವದರ್ಪಣ ಕಾರ್ಯಕ್ರಮದಲ್ಲಿ ಶುಕ್ರವಾರ ಭಗವದ್ಗೀತೆಯ ಮಹತ್ತ್ವದ ಕುರಿತು ಮಾತನಾಡಿದರು.

ವೇದ ಹಾಗೂ ಉಪನಿಷತ್ತುಗನ್ನು ಅರ್ಥೈಸಿಕೊಳ್ಳಲು ಜನಸಾಮಾನ್ಯರಿಗೆ ಅಸಾದ್ಯವಾದಾಗ ಈ ಭಗವದ್ಗೀತೆಯು ಅವುಗಳ ಸಾರಸಂಗ್ರಹ ರೂಪದಲ್ಲಿ ಜನಮಾನಸವನ್ನು ತಲುಪಿದೆ, ಮತ್ತು ಬದುಕಿಗೆ  ಅತ್ಯಂತ ಒಳ್ಳೆಯ ಮಾರ್ಗದರ್ಶಿ ಭಗವದ್ಗೀತೆ. ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಮೋಕ್ಷಸನ್ಯಾಸ ಯೋಗಗಳಂತಹ ಅನೇಕ ಯೋಗಗಳನ್ನೊಳಗೊಂಡ ಭಗವದ್ಗೀತೆಯು ಅನೇಕತೆಯಲ್ಲಿ ಏಕತೆಯನ್ನು ಸಾರುವಂತ ಮಹಾನ್ ಗ್ರಂಥ. ಪ್ರತಿಯೊಬ್ಬನೂ ಗೀತೆಯಲ್ಲಿ ಹೇಳಲ್ಪಟ್ಟ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಆತ ಮಾನುಷ್ಯ ಜೀವನದ ಪರಮತತ್ತ್ವವಾದ ಮೋಕ್ಷದ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಆಧ್ಯಾತ್ಮದಲ್ಲಿ ಭಗವದ್ಗೀತೆಯು ದಾರಿದೀಪ ಮತ್ತು ಭಾರತೀಯ ಮೂಲದ ಈ ಭಗವದ್ಗೀತೆ ಇಂದು ಇಡೀ ವಿಶ್ವದಲ್ಲೆ ಅತ್ಯಂತ ಉತ್ತಮ ಮನ್ನಣೆಯನ್ನು  ಪಡೆದಿದೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಎಮ್ ಟಿ ಜಯರಾಮ್ ಭಟ್, ಸಂಸ್ಕೃತ ಸಂಘದ ಸಂಯೋಜಕ ಡಾ. ಶ್ರೀಶ ಕುಮಾರ್ ಎಮ್ ಕೆ, ಅಧ್ಯಕ್ಷೆ ಸಾಯಿ ಶ್ರೀಪದ್ಮ, ಕಾರ್ಯದರ್ಶಿ ಮನೋಜ್ ಕುಮಾರ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಪೂರ್ಣಿಮ ಪ್ರಾರ್ಥಿಸಿದರು, ವಿದ್ಯಾರ್ಥಿ ವೆಂಕಟೇಶ್ ಪ್ರಸಾದ್ ಸ್ವಾಗತಿಸಿ, ಗಣಪತಿ ವಂದಿಸಿದರು. ವಿದ್ಯಾರ್ಥಿ ನವನೀತ್ ಕಾರ್ಯಕ್ರಮ ನಿರೂಪಿಸಿದರು.