ವಿವೇಕಾನಂದ ಕಾಲೇಜಿನಲ್ಲಿ ಐಟಿ ಫೆಸ್ಟ್ ಟೆಕ್ನೋ ತರಂಗ್ ಉದ್ಘಾಟನೆ

ಪುತ್ತೂರು: ಅಮೇರಿಕಾದ ಅರ್ಥವ್ಯವಸ್ಥೆಗೆ 28 ಶೇಕಡಾ ಭಾರತೀಯ ಮೂಲದ ಇಂಜಿನಿಯರುಗಳ ಕೊಡುಗೆ ಇದೆ.. ಈಗ ಎಚ್. 1 ವೀಸಾವನ್ನು ನಿರಾಕರಿಸುವ ಹಿನ್ನೆಲೆಯಲ್ಲಿ ಅಲ್ಲಿ ಚರ್ಚೆ ನಡೆಯುತ್ತಿದೆ. ಅದು ಪ್ರಾಯೋಗಿಕವಾಗಿ ಜಾರಿಗೊಂಡರೆ ಅಲ್ಲಿರುವ ಭಾರತೀಯರು ಮರಳಿ ನಮ್ಮ ದೇಶಕ್ಕೆ ಬರಬೇಕಾಗುತ್ತದೆ. ಹಾಗಾದಾಗ ಉದ್ಯೋಗ ಮಾರುಕಟ್ಟೆಯಲ್ಲಿ ಹೊಸಬರಿಗೆ ಸಾಕಷ್ಟು ಸವಾಲು ಎದುರಾಗಲಿದೆ  ಎಂದು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಸುಧೀರ್ ಶೆಟ್ಟಿ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೀ ಐಟಿ ಕ್ಲಬ್‌ನ ಆಶ್ರಯದಲ್ಲಿ ಆಯೋಜಿಸಲಾದ ಟೆಕ್ನೋ ತರಂಗ್ – 18 ಅನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಇನ್ಫೋಸಿಸ್ ನಂತಹ ಕಂಪೆನಿ ತಾನು ಒಬ್ಬ ವ್ಯಕ್ತಿಯನ್ನು ಉದ್ಯೋಗಕ್ಕೆ ಆಯ್ಕೆ ಮಾಡಿದ ನಂತರ ಆತನಿಗೆ ಟ್ರೈನಿಂಗ್ ಕೊಡುವುದಕ್ಕಾಗಿ ಸುಮಾರು ಮೂವತ್ತು ಲಕ್ಷ ವ್ಯಯ ಮಾಡುತ್ತಿತ್ತು. ಈಗ ಆ ಮೊತ್ತದಲ್ಲಿ ಸುಮಾರು ಎಂಬತ್ತು ಶೇಕಡಾವನ್ನು ಕಡಿತಗೊಳಿಸಿದೆ. ಅರ್ಥಾತ್ ಸಾಕಷ್ಟು ಕೌಶಲ್ಯ ಉಳ್ಳವರನ್ನೇ ಉದ್ಯೋಗಕ್ಕಾಗಿ ಆಯ್ಕೆ ಮಾಡುತ್ತಿದೆ ಎಂಬುದನ್ನು ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.

ಐಟಿ ಕ್ಷೇತ್ರದ ಉದ್ಯೋಗಾವಕಾಶ ತುಸು ಕುಸಿದಂತೆ ಕಾಣುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಮೌಲ್ಯವರ್ಧನೆಗೆ ಒಳಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ವಿವಿಧ ಐಟಿ ಸ್ಪರ್ಧೆಗಳು, ಕಾರ್ಯಾಗಾರಗಳು, ಸೆಮಿನಾರ್‌ಗಳು ಸಹಾಯ ಮಾಡುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ದೊರಕುವ ಅನುಭವ ಉದ್ಯೋಗವನ್ನು ಪಡೆಯುವಲ್ಲಿ ಸಹಾಯ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವರ್ಷದಿಂದ ವರ್ಷಕ್ಕೆ ಕಾಲೇಜಿನ ಬಿ.ಸಿ.ಎ ವಿಭಾಗಕ್ಕೆ ಸೇರಿಕೊಳ್ಳಬಯಸುವವರ ಅರ್ಜಿ ಏರಿಕೆಯಾಗುತ್ತಿದೆ. ನೂರಕ್ಕೂ ಅಧಿಕ ಅರ್ಜಿಗಳಲ್ಲಿ ಅರವತ್ತು ಮಂದಿಯನ್ನಷ್ಟೇ ಆಯ್ಕೆ ಮಾಡುತ್ತಿದ್ದೇವೆ. ಇಲ್ಲಿನ ವಿಭಾಗದಲ್ಲಿ ಅನುಭವವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ನುಡಿದರು.

ಕಾರ್ಯಕ್ರಮಗಳು ಸಾಕಷ್ಟು ಪ್ರಾಯೋಗಿಕ ಜ್ಞಾನವನ್ನು ಒದಗಿಸುತ್ತವೆ. ಇಲ್ಲಿ ಪಡೆದ ಅನುಭವ ಮುಂದೊಂದು ದಿನ ಇನ್ನೆಲ್ಲೋ ಉಪಯೋಗಕ್ಕೆ ಬರುತ್ತವೆ. ವಿದ್ಯಾರ್ಥಿಗಳು ಎಷ್ಟು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೋ ಅಷ್ಟು ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ಐಟಿ ಫೆಸ್ಟ್ ಕೇವಲ ಒಂದು ಕಾರ್ಯಕ್ರಮವಲ್ಲ. ಇದು ಅನುಭವದ ವೇದಿಕೆ. ಕಳೆದ ಹತ್ತು ವರ್ಷಗಳಿಂದ ಇಂತಹ ಕಾರ್ಯವನ್ನು ಕಾಲೇಜಿನ ಬಿ.ಸಿ.ಎ ವಿಭಾಗ ನಡೆಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳ ಪ್ರತಿಕ್ರಿಯೆ, ಭಾಗವಹಿಸುವವರ ಆಸಕ್ತಿ ಕಾಣುವಾಗ ಕಾರ್ಯಕ್ರದ ಬಗೆಗೆ ತೃಪ್ತಿ ಮೂಡುತ್ತದೆ ಎಂದರಲ್ಲದೆ ಒಂದು ಕಾಲಕ್ಕೆ ಕಂಪ್ಯೂಟರ್ ಸಾಕಷ್ಟು ಅವಕಾಶ ಸೃಷ್ಟಿಸುತ್ತಿರುವ ಕ್ಷೇತ್ರವಾಗಿತ್ತು. ಆದರೆ ಕ್ರಮೇಣ ಈ ಕ್ಷೇತ್ರದಲ್ಲೂ ಸ್ಪರ್ಧೆಗಳು ಅತಿಯಾಗಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಯಾರಾಗಬೇಕು. ಹಾಗಂತ ಸರಿಯಾಗಿ ತಯಾರಾದರೆ ಉದ್ಯೋಗದ ಬಗೆಗೆ ಆತಂಕ ಬೇಕಿಲ್ಲ ಎಂದು ನುಡಿದರು.

ವೇದಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ, ಐಟಿ ಕ್ಲಬ್ ನ ಅಧ್ಯಕ್ಷ ನಿಶಾಂತ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಮೃತ ವರ್ಷಿಣಿ ಪ್ರಾರ್ಥಿಸಿದರು. ಐಟಿ ಕ್ಲಬ್ ನ ಸಂಯೋಜಕ, ಉಪನ್ಯಾಸಕ ಸೂರ್‍ಯನಾರಾಯಣ ಸ್ವಾಗತಿಸಿದರು. ಕ್ಲಬ್‌ನ ಕಾರ್ಯದರ್ಶಿ ಶ್ರೇಯಾ ವಂದಿಸಿದರು. ವಿದ್ಯಾರ್ಥಿನಿ ಜೊನಿಟಾ ಹಾಗೂ ನೀಮಾ ಕಾರ್ಯಕ್ರಮ ನಿರ್ವಹಿಸಿದರು.

ಸೈಂಟ್ ಅಲೋಶಿಯಸ್ ಕಾಲೇಜು, ಮಂಗಳೂರು, ಎಸ್.ಡಿ.ಎಂ. ಕಾಲೇಜು, ಮಂಗಳೂರು, ಎಸ್.ಡಿ.ಎಂ. ಕಾಲೇಜು, ಉಜಿರೆ, ಭಂಡಾರ್‌ಕಾರ್‍ಸ್ ಕಾಲೇಜು, ಕುಂದಾಪುರ, ಪೂರ್ಣ ಪ್ರಜ್ಞಾ ಕಾಲೇಜು, ಉಡುಪಿ, ವಿಜಯಾ ಕಾಲೇಜು, ಮುಲ್ಕಿ, ಶ್ರೀದೇವಿ ಕಾಲೇಜು, ಮಂಗಳೂರು, ಕೆನರಾ ಕಾಲೇಜು, ಮಂಗಳೂರು, ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ಧವಳಾ ಕಾಲೇಜು, ಮೂಡಬಿದ್ರೆ, ಸರಕಾರಿ ಪ್ರ.ದ. ಕಾಲೇಜು, ಕಾರ್ ಸ್ಟ್ರೀಟ್, ಸರಕಾರಿ ಮಹಿಳಾ ಪ್ರ.ದ. ಕಾಲೇಜು, ಬಲ್ಮಠ, ಸೈಂಟ್ ಪಿಲೋಮಿನಾ ಕಾಲೇಜು ಪುತ್ತೂರು, ಎಂ.ಜಿ.ಎಂ, ಕಾಲೇಜು ಕುಶಾಲ ನಗರ, ಸೈಂಟ್ ಅಣ್ಣೇಸ್ ಕಾಲೇಜು, ವಿರಾಜಪೇಟ್, ರಾಮಕೃಷ್ಣ ಕಾಲೇಜು ಮಂಗಳೂರು, ಸೈಂಟ್ ಅಗ್ನೇಸ್ ಕಾಲೇಜು ಮಂಗಳೂರು, ಸರಕಾರಿ ಪ್ರ.ದ. ಕಾಲೇಜು, ಬೆಟ್ಟಂಪಾಡಿ, ಎಫ್.ಎಮ್.ಕೆ.ಎಮ್. ಕಾಲೇಜು ಮಡಿಕೇರಿ, ಬಿ.ಎಮ್. ಹೆಗ್ಡೆ ಪ್ರ.ದ. ಕಾಲೇಜು, ಕುಂದಾಪುರ, ಶ್ರೀ ಭಾರತಿ ಕಾಲೇಜು, ಮಂಗಳೂರು, ಕಾರ್ಮೆಲ್ ಕಾಲೇಜು, ಮೊಡಂಕಾಪು, ಗೋವಿಂದದಾಸ್ ಕಾಲೇಜು ಸುರತ್ಕಲ್, ಸೆಕ್ರೇಡ್ ಹಾರ್ಟ್ ಕಾಲೇಜು, ಮಡ್ಯಂತಾರು, ಎಸ್.ವಿ.ಎಸ್. ಕಾಲೇಜು ಬಂಟ್ವಾಳ, ಸರಕಾರಿ ಪ್ರ.ದ. ಕಾಲೇಜು, ಉಪ್ಪಿನಂಗಡಿ, ಬೆಸೆಂಟ್ ಕಾಲೇಜು, ಮಂಗಳೂರು, ಕಣಚೂರು ಇನ್ಸಿಟಿಟ್ಯೂಟ್ ಆಪ್ ಮ್ಯಾನೇಜಮೆಂಟ್ ಸ್ಟಡೀಸ್, ಮಂಗಳೂರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.