ವಿವೇಕಾನಂದ ಪತ್ರಿಕೋದ್ಯಮದಲ್ಲಿ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ – ಕಸ ಎಸೆಯದಿರುವ ಪ್ರತಿಜ್ಞೆ ಮಾಡೋಣ : ನವೀನ್ ಡಿ ಪಡೀಲ್

ಪುತ್ತೂರು: ಸ್ವಚ್ಛ ಭಾರತ ಎಂಬುವುದು ಎಲ್ಲರ ಕನಸು. ಅದಕ್ಕೆ ಬದಲಾವಣೆಯ ಅಗತ್ಯತೆ ಇದೆ. ಆ ಬದಲಾವಣೆ ಮೊದಲು ನಮ್ಮೊಳಗೆ ಹುಟ್ಟಬೇಕು. ಕಸವನ್ನು ಹೆಕ್ಕುವುದಕ್ಕಿಂತ ಎಲ್ಲೆಂದರಲ್ಲಿ ಕಸ ಬಿಸಾಡಲಾರೆ ಎಂಬ ನಿರ್ಧಾರ ಮಾಡುವ ಅಗತ್ಯತೆ ಇದೆ. ನಿಸರ್ಗ ದೇವರಿತ್ತ ಸಂಪತ್ತು. ಅವುಗಳನ್ನು ಸುಂದರವಾಗಿ, ಸ್ವಚ್ಛವಾಗಿರಿಸಿಕೊಳ್ಳುತ್ತೇವೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ತನ್ನ ಕರ್ತವ್ಯವನ್ನು ನಿರ್ವಹಿಸಿದಾಗ ಮಾತ್ರ ಉನ್ನತಿಯತ್ತ ಸಾಗಲು ಸಾಧ್ಯವಿದೆ ಎಂದು ತುಳು ಚಿತ್ರರಂಗದ ಖ್ಯಾತ ಕಲಾವಿದ ಕುಸಲ್ದರಸೆ ನವೀನ್ ಡಿ. ಪಡೀಲ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ದ್ವಿತೀಯ ಪತ್ರ್ರಿಕೋದ್ಯಮ ವಿದ್ಯಾರ್ಥಿ ಸಾಯಿಶ್ ಕುಮಾರ್ ನಿರ್ದೇಶನದ ಸ್ವಚ್ಚ ಭಾರತದ ಬಗೆಗಿನ ಕಿರುಚಿತ್ರ ’ದಿ ಚೇಂಜ್’ ಲೋಕಾರ್ಪಣೆಗೈದು ಮಂಗಳವಾರ ಮಾತನಾಡಿದರು.

ನಾಲ್ಕು ದಿನದ ಈ ಜೀವನದಲ್ಲಿ ದ್ವೇಷ ಮರೆತು ಸೌಹಾರ್ದ ಜೀವನ ನಡೆಸುವ ಅಗತ್ಯತೆ ಇದೆ. ಅದಕ್ಕಾಗಿ ನಮ್ಮಲ್ಲಿ ಮೊದಲು ನಮ್ಮ ಮಣ್ಣು, ನೆಲದ ಸಂಸ್ಕೃತಿ, ಮಾತೃಭಾಷೆಯ ಬಗ್ಗೆ ಅಭಿಮಾನ ಮೂಡಬೇಕು. ಅದು ನಮ್ಮ ಸಂಪತ್ತು. ಅವುಗಳ ಬಗ್ಗೆ ಕೀಳರಿಮೆ, ಹಿಂಜರಿಕೆ ಸರಿಯಲ್ಲ ಯುವಕರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನವೀಯಬೇಕು. ನಮ್ಮತನವನ್ನು ಮೆರೆಸುವುದಕ್ಕೆ ನಾವು ಸದಾ ಯತ್ನದಲ್ಲಿರಬೇಕು. ಈ ನಿಟ್ಟಿನಲ್ಲಿ ಸಾಯೀಶ್ ಕುಮಾರ್ ಹಾಗೂ ತಂಡದ ಪ್ರಯತ್ನ ಶ್ಲಾಘನೀಯ ಎಂದು ನುಡಿದರು.

ಗೌರವ ಉಪಸ್ಥಿತಿ ನೀಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಅನೇಕ ವರ್ಷಗಳಲಿಂದ ಕಿರುಚಿತ್ರಗಳನ್ನು ಹೊರತರುತ್ತಾ ಬಂದಿದೆ. ಇಲ್ಲಿನ ವಿದ್ಯಾರ್ಥಿಗಳು ಆನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡವೂ ಪತ್ರಿಕೋದ್ಯಮ ವಿಭಾಗದ ಕಿರುಚಿತ್ರ ತಯಾರಿಯ ಬಗೆಗೆ ವಿಶೇಷ ಪ್ರಶಂಸೆ ಮಾಡಿತ್ತು. ವಿದ್ಯಾರ್ಥಿಗಳು ಸಾಧನೆ ಮೆರೆಯುವ ಅವಕಾಶ ವಿವೇಕಾನಂದ ಕಾಲೇಜಿನಲ್ಲಿ ಸಮೃದ್ಧವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್ ಮಾತನಾಡಿ, ನಟನೆ ಜೀವನವನ್ನು ಕಟ್ಟಿಕೊಡುವುದಿಲ್ಲ ಎಂಬ ಪೂರ್ವಾಗ್ರಹ ಅನೇಕ ಹೆತ್ತವರಲ್ಲಿದೆ. ಆ ಮೂಲಕ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಹತ್ತಿಕ್ಕಲಾಗುತ್ತಿದೆ. ಸಿನಿಮಾ ಕ್ಷೇತ್ರ ಉಜ್ವಲವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಹೊಸ ಪ್ರತಿಭೆಗಳ ಅವಶ್ಯಕತೆ ಇದೆ.  ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ತುಳು ಚಿತ್ರ ಕಲಾವಿದ ಚಂದ್ರಹಾಸ ಕಿರುಚಿತ್ರ ನಿರ್ದೇಶಕ ಸಾಯೀಶ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ವೃಂದ ಕುಸಲ್ದರಸೆ ನವೀನ್  ಡಿ. ಪಡೀಲ್ ಅವರನ್ನು ಅಭಿನಂದಿಸಲು ಬಯಸಿತ್ತು. ಆ ಸಂದರ್ಭದಲ್ಲಿ ಪಡೀಲ್ ಕಿರುಚಿತ್ರ  ನಿರ್ದೇಶಕ ಸಾಯಿಶ್ ಕುಮಾರ್ ಅವರನ್ನು ತಮ್ಮ ಸ್ಥಾನದಲ್ಲಿ ಕುಳ್ಳಿರಿಸಿ ಸನ್ಮಾನಿಸಿದ್ದು ಅವರ ಸರಳತೆಯನ್ನು ಪ್ರತಿನಿಧಿಸಿತ್ತು.

ಪತ್ರಿಕೊದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಜಿ.ಶ್ರೀಧರ್ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.