ವಿವೇಕಾನಂದದಲ್ಲಿ ಫೋಟೋಗ್ರಫಿ ಬಗೆಗೆ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ರೀತಿಯ ಕಲೆ ಅಡಗಿರುತ್ತದೆ. ಆ ಕಲೆಯನ್ನು ಗುರುತಿಸುವ ಕಾರ್ಯ ವಿದ್ಯಾರ್ಥಿ ಜೀವನದಲ್ಲೇ ಆಗಬೇಕು. ಛಾಯಾಗ್ರಹಣವೂ ಒಂದು ಅತ್ಯುತ್ತಮ, ಬದುಕಿಗೆ ಪೂರಕವೆನಿಸುವ ಕಲೆಯಾಗಿದೆ ಎಂದು ವಿವೇಕಾನಂದ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕ ಗಣೇಶ್ ಪ್ರಸಾದ್ ಎ ಹೇಳಿದರು.

ಅವರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಮತ್ತು ನಯನ ಪೋಟೋಗ್ರಾಫಿಕ್ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಛಾಯಾಚಿತ್ರ ಬಗೆಗಿನ ಸರ್ಟಿಫಿಕೇಟ್ ಕೋರ್ಸ್ ಅನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

ವ್ಯಕ್ತಿಯಲ್ಲಿನ ಸಾಮರ್ಥ್ಯ ಪ್ರಕಟಗೊಂಡಾಗ ಮಾತ್ರ ಸಮಾಜದಲ್ಲಿ ಒಂದು ಒಳ್ಳೆ ಸ್ಥಾನವನ್ನು ಪಡೆದು ಗುರುತಿಸಿಕೊಳ್ಳಲು ಸಾಧ್ಯ. ಛಾಯಾಗ್ರಹಣ ಇಂದು ಮಾಧ್ಯಮ ಅವಿಭಾಜ್ಯ ಅಂಗಗಳಲ್ಲಿ ಒಂದಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಇಂದು ಸಾಕಷ್ಟು ಅವಕಾಶವಿದ್ದು, ನುರಿತ ಫೋಟೋಗ್ರಾಫರ್ ಗಳಿಗೆ ಒಳ್ಳೆಯ ಆದ್ಯತೆ ದೊರೆಯುತ್ತದೆ. ಅಲ್ಲದೆ ಸ್ವಂತವಾಗಿಯೂ ಜೀವನ ಕಟ್ಟಿಕೊಳ್ಳುವುದಕ್ಕೆ ಇದು ಸಹಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಪ್ರತಿಯೊಬ್ಬರಿಗೂ ಅವರದೇ ಆದ ಆಸಕ್ತಿಯ ಕ್ಷೇತ್ರ ಇರುತ್ತದೆ. ಛಾಯಾಗ್ರಹಣವೂ ಒಂದು ಅತ್ಯುತ್ತಮ ಆಸಕ್ತಿದಾಯಕ ವಿಷಯ ಆಗಬಲ್ಲುದು. ವಿದ್ಯಾರ್ಥಿಗಳಿಗೆ ಕೇವಲ ಪದವಿ ದೊರಕಿದರೆ ಸಾಲದು, ಅದರೊಂದಿಗೆ ಇನ್ನೂ ಹೆಚ್ಚಿನ ಜ್ಞಾನ ದೊರಕಬೇಕೆಂಬ ಉದ್ದೇಶದಿಂದ ವಿವಿಧ ಬಗೆಯ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಕಾಲೇಜು ಆರಂಭಿಸಿದೆ ಎಂದು ನುಡಿದರು.

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ ಆರ್ ನಿಡ್ಪಳ್ಳಿ ಸ್ವಾಗತಿಸಿ. ಎಂ.ಸಿ.ಜೆ ಉಪನ್ಯಾಸಕಿ ಪ್ರಜ್ಞ ವಂದಿಸಿದರು. ಉಪನ್ಯಾಸಕಿ ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.