ವಿವೇಕಾನಂದದಲ್ಲಿ ಸಾಹಿತ್ತಿಕ, ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ : ಭಾರತೀಯ ಸಂಸ್ಕೃತಿಯ ಅಧ್ಯಯನದ ಅಗತ್ಯವಿದೆ : ಪ್ರೊ.ಕೃಷ್ಣಮೂರ್ತಿ ಕೆ.ಜಿ

ಪುತ್ತೂರು: ಭಾರತೀಯ ಸಂಸ್ಕೃತಿಯನ್ನು ಯುವಜನರು ಅರಿತುಕೊಳ್ಳಬೇಕು. ಇದನ್ನು  ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವೂ ಇದೆ. ಇದಕ್ಕಾಗಿ ಭಾರತೀಯ ಸಂಸ್ಕೃತಿಯ ಅಧ್ಯಯನ ಮಾಡುವ ಅವಶ್ಯಕತೆಯಿದೆ. ಮಾತ್ರವಲ್ಲದೇ ಯುವಜನರು ಸ್ಥಿತ ಪ್ರಜ್ಞರಾದಾಗ ಮಾತ್ರ ಭಾರತೀಯ ಸಂಸ್ಕೃತಿಯ ಉತ್ತಮ ಅಂಶಗಳನ್ನು ಪಡೆಯಲು ಸಾಧ್ಯ ಎಂದು ಎಂದು ವಿವೇಕಾನಂದ ಕಾನೂನು ಕಾಲೇಜಿನ ಪ್ರಾಚಾರ್ಯ ಕೃಷ್ಣಮೂರ್ತಿ ಕೆ.ಜಿ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವಿವೇಕಾನಂದ ಜಯಂತಿಯ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸಾಹಿತ್ಯ – ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ  ಮಾತನಾಡಿದರು.

News Photo - V Jayanthi

ವಿಚಾರ ವಿನಿಮಯದ ಜೊತೆಗೆ ವ್ಯಕ್ತಿ ಸ್ನೇಹವನ್ನು ಹಂಚಿಕೊಳ್ಳುವುದು ವಿವೇಕ ಜಯಂತಿ ಸ್ಪರ್ಧೆಯ ಮುಖ್ಯ ಉದ್ದೇಶ. ಇದೊಂದು ವಿಶಿಷ್ಟ ಕಾರ್ಯಕ್ರಮ. ವಿವೇಕಾನಂದರ ಸಂಸ್ಕೃತಿಯನ್ನು ಮತ್ತೊಮ್ಮೆ ಮನನ ಮಾಡಿಸುವುದು ಈ ಕಾರ್ಯಕ್ರಮದ ಧ್ಯೇಯವಾಗಿದೆ. ಸ್ಪರ್ಧಾಕಾರ್ಯಕ್ರಮಗಳು ಯುವ ಜನರಿಗೊಂದು ದಿಕ್ಸೂಚಿಯ ಕಾರ್ಯಕ್ರಮವಾಗಿದೆ ನುಡಿದರು.

ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ ಪ್ರತಿಯೊಬ್ಬರಿಗೂ ಯಶಸ್ಸನ್ನು ಗಳಿಸುವ ಹಂಬಲವಿರುತ್ತದೆ. ಅದಕ್ಕಾಗಿ ನಂಬಿಕೆ ಇರಿಸುವ ಅಗತ್ಯವಿದೆ. ಸ್ಪರ್ಧಿಗಳು ವಿಶ್ವಾಸದಿಂದ ಸ್ಪರ್ಧಿಸಿದರೆ ಮಾತ್ರ ಸಫಲರಾಗಲು ಸಾಧ್ಯ. ನಂಬಿಕೆ ವಿಶ್ವಾಸ ಹಾಗೂ ಆಸಕ್ತಿಯಿಂದ ಪ್ರತಿಯೊಬ್ಬರೂ ಭಾಗವಹಿಸುವ ಅವಶ್ಯಕತೆಯಿದೆ. ಆಗ ಮಾತ್ರ ಗೆಲುವನ್ನು ಸಾಧಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸಾಹಿತ್ಯ ಮತ್ತು ಸಾಂಸೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಮನೋಬಲ ಮತ್ತು ಕೌಶಲ್ಯತೆ ಉಳಿದ ವಿದ್ಯಾಥಿಗಳಿಗಿಂತ ಹೆಚ್ಚಿರುತ್ತದೆ. ಮಾತ್ರವಲ್ಲದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮುಖಾಂತರ ವಿವೇಕಾನಂದರ ಸಂದೇಶಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿ ವರುಣ್ ಪ್ರಾರ್ಥಿಸಿದರು. ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ. ಎಂ. ಕೆ. ಶ್ರೀಶ ಕುಮಾರ್ ನಿರ್ವಹಿಸಿ ಸ್ವಾಗತಿಸಿದರು, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ರಮೇಶ್ ಕೆ ವಂದಿಸಿದರು.