ಅರ್ಥಶಾಸ್ತ್ರದ ನಮ್ಮ ಬದುಕಿನ ಭಾಗ: ಡಾ. ಪ್ರಭಾಕರ ಶಿಶಿಲ

ಪುತ್ತೂರು: ವಿಷಯದ ಪ್ರಸ್ತುತತೆ ಹಾಗೂ ಅಪ್ರಸ್ತುತತೆ ಎಂಬುವುದು ಸಮಾಜ ಅದಕ್ಕೆ ನೀಡುವ ಪ್ರಾಮುಖ್ಯತೆಯನ್ನು ಅವಲಂಬಿಸಿದೆ. ಅರ್ಥಶಾಸ್ತ್ರ ಎಂಬುವುದು ನಮ್ಮ ಜೀವನದಲ್ಲಿ ನಮಗರಿವಿಲ್ಲದಂತೆಯೇ ಒಂದಾಗಿ ಬೆಳೆದುಕೊಂಡು ಬಂದಿದೆ. ಅದನ್ನು ನಿರ್ದಿಷ್ಟವಾಗಿ ವಿವರಿಸುವುದು ಕಷ್ಟಸಾಧ್ಯ ಎಂದು ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ, ಲೇಖಕ ಡಾ. ಪ್ರಭಾಕರ್ ಶಿಶಿಲ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ವಿವೇಕಾನಂದ ಸೆಂಟರ್ ಫಾರ್ ರಿಸರ್ಚ್ ಅಂಡ್ ಸ್ಟಡೀಸ್ ಆಯೋಜಿಸಿದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ  ಅರ್ಥಶಾಸ್ತ್ರದ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ಬುಧವಾರ ಮಾತನಾಡಿದರು.

ಶ್ರಮ ವಿಭಜನೆ ಎಂಬುವುದು ನೈಸರ್ಗಿಕವಾದದ್ದು. ಸ್ವಾಭಾವಿಕವಾಗಿ ಕೆಲಸವನ್ನು ಹಂಚಿಕೊಂಡು ಮಾಡುವ ಗುಣ ನಮ್ಮಲ್ಲಿ ಬೆಳೆದು ಬಂದಿದೆ. ಬೇಡಿಕೆ ಹಾಗೂ ಪೂರೈಕೆಯ ನಡುವೆ ಅಂತರ ಹೆಚ್ಚಾದಾಗ ನಿರುದ್ಯೋಗದ ಸಮಸ್ಯೆಯೂ ಹೆಚ್ಚುತ್ತದೆ. ಪೂರೈಕೆ ಎಂಬುವುದು ತನ್ನ ಬೇಡಿಕೆಯನ್ನು ಹೆಚ್ಚಿಸುವಂತಿರಬೇಕು ಎಂದು ಅಭಿಪ್ರಾಯಪಟ್ಟರು.

ಯಾವುದೇ ಓದಿಗೆ ಉದ್ಯೋಗ ಇಲ್ಲ ಎಂದಿಲ್ಲ. ನಮ್ಮ ವಿಷಯದಲ್ಲಿ ನಾವು ಕೌಶಲ್ಯರಾಗಿರಬೇಕು. ಅಂಕವೊಂದೇ ಮುಖ್ಯವಲ್ಲ. ನಮ್ಮ ಸಾಮಾನ್ಯ ಜ್ಞಾನವೂ ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಮಾತನಾಡಿ, ಯಾವುದೇ ಒಂದು ವಸ್ತು ಅಥವಾ ವಿಷಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದಾಗ ಅದು ತನ್ನ ಬೇಡಿಕೆಯನ್ನು ಕಳೆದುಕೊಳ್ಳುತ್ತದೆ.  ಯಾವುದೇ ವಿಭಾಗದಲ್ಲಿ ಪದವಿ ಪಡೆದರೂ ವಿಷಯ ಜ್ಞಾನವಿದ್ದಾಗ ಉದ್ಯೋಗ ಪಡೆಯುವುದು ಕಷ್ಟವಲ್ಲ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಮ್.ಟಿ. ಜಯರಾಮ್ ಭಟ್ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳಿಂದ, ವಿಷಯ ಪಾಂಡಿತ್ಯ ಹೊಂದಿದರನ್ನು ಕರೆಯಿಸಿ ಮಾಹಿತಿ ಕಾರ್ಯಕ್ರಮ, ಅತಿಥಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟದ ಏರಿಕೆಗೆ ಕಾರಣವಾಗುತ್ತದೆ, ಕಲಿಕಾ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ ಎಂದು  ಅನಿಸಿಕೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅರ್ಥಶಾಸ್ತ್ರದ ಪಠ್ಯ ಪುಸ್ತಕಗಳು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚಿನ ಕೃತಿಗಳನ್ನ ರಚಿಸಿ ವಿದ್ಯಾಥಿ ಸ್ನೇಹಿ ಪ್ರಾಧ್ಯಾಕ ಎನಿಸಿಕೊಂಡ ಡಾ. ಪ್ರಭಾಕರ ಶಿಶಿಲ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿ ಶಿವಶಂಕರ ಮಯ್ಯ ಪ್ರಾರ್ಥಿಸಿದರು. ಕಾಲೇಜಿನ ಶೈಕ್ಷಣಿಕ ನಿರ್ದೇಶಕ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಘ್ನೇಶ್ವರ ವರ್ಮುಡಿ ಪ್ರಸ್ತಾವನೆಗೈದರು. ಉಪನ್ಯಾಸಕ ಪ್ರೊ.ವಾಸುದೇವ ಸ್ವಾಗತಿಸಿ, ಡಾ. ವಿಷ್ಣುಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಲೋಲಾಕ್ಷಿ ವಂದಿಸಿದರು.