ಶ್ರೀಮಂತಿಕೆಯನ್ನು ಹೃದಯದಿಂದ ಅಳೆಯಬೇಕು : ಡಾ.ದಾಮ್ಲೆ

ಪುತ್ತೂರು: ಕಲಾವಿದತ್ವವು ಕೆಲವರಿಗೆ ರಕ್ತಗತವಾಗಿ ಕುಟುಂಬದಿಂದ ಬಂದಿದ್ದರೆ ಇನ್ನು ಕೆಲವರಲ್ಲಿ ಅದು ಅವರ ಪರಿಸರದಿಂದ ಬಂದಿರುತ್ತದೆ. ಕಲೆಗೆ ನಮ್ಮ ಹೃದಯ ಕಂಪನ ಮಾಡುವ ಅದ್ಭುತ ಶಕ್ತಿ ಇದೆ. ಮನುಷ್ಯರೆಂದ ಮೇಲೆ ಅವರಲ್ಲಿ ಯಾವುದಾದರು ವಿಶೇಷ ಸಾಮರ್ಥ್ಯ ಅಡಗಿರುತ್ತದೆ. ಅದನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ದೊರಕಬೇಕು ಎಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ್ ದಾಮ್ಲೆ ಹೇಳಿದರು

ಅವರು ಕಾಲೇಜಿನ ಐಕ್ಯೂಎಸಿ ಮತ್ತು ಲಲಿತಕಲಾ ಸಂಘದ  ವತಿಯಿಂದ ಆಯೋಜಿಸಲಾದ ಲಲಿತ ಕಲಾ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಶ್ರೀಮಂತಿಕೆಯನ್ನು ಹಣದಿಂದ ಅಳೆಯಬಾರದು. ಬದಲಾಗಿ ಹೃದಯ ಶ್ರೀಮಂತಿಕೆಯ ಆಧಾರದಲ್ಲಿ ಅವಲೋಕಿಸಬೇಕು. ಅಂತಹ ಹೃದಯ ಶ್ರೀಮಂತಿಕೆ ಹೆಚ್ಚುವಲ್ಲಿ ಕಲೆ, ಸಾಹಿತ್ಯದ ಪಾತ್ರ ಬಹಳ ದೊಡ್ಡದು. ಏಕಾಗ್ರತೆಯಿಂದ ನಿಗದಿತ ಕಲೆಯ ಸಾಕಾರ ಮಾಡಿಕೊಳ್ಳಲು ಸಾಧ್ಯ. ಶ್ರಮದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ನಮ್ಮದಾಗುತ್ತದೆ ಎಂದು ನುಡಿದರು.

ಕಲಾವಲಯದಲ್ಲಿ ಸಮಾನತೆ ಇದೆ. ಎಲ್ಲರೂ ಪರಸ್ಪರ ಗೌರವದಿಂದ ಕಾಣುವ ವ್ಯವಸ್ಥೆ ಇದೆ. ಇದಕ್ಕೆ ಕಾರಣ ಕಲೆಯೇ ಹೊರತಾಗಿ ಇನ್ನೇನೂ ಅಲ್ಲ. ನಮ್ಮ ನಡುವೆ ಸಮಾನ ಭಾವ, ಯೋಚನೆಯನ್ನು ತರಬಲ್ಲ ಸಾಮರ್ಥವಿರುವ ಕಲೆಗೆ ನಮ್ಮನ್ನು ನಾವು ಅರ್ಪಿಸಿಕೊಂಡಾಗ ಸಿದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ,ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಕಲೆಯೆಂದರೆ ಅದು ನಮ್ಮ ಸೌಂದರ್ಯ ಪ್ರಜ್ಞೆಗೆ ಸಂಬಂಧ ಪಟ್ಟವಿಚಾರ. ಕಲೆಯನ ಮೌಲ್ಯವು ಮನುಷ್ಯ ಸ್ವೀಕರಿಸುವುದರ ಮೇಲೆ ನಿರ್ಣಯವಾಗುತ್ತದೆ ಎಂದು ನುಡಿದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ಶ್ರೀಧರ್‌ಎಚ್.ಜಿ ,ಲಲಿತಕಲಾ ಸಂಘದ ಸಂಯೋಜಕಿ ಡಾ.ದುರ್ಗಾರತ್ನ, ಜತೆ ಕಾರ್ಯದರ್ಶಿ ಸ್ವಾತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಲಿತಕಲಾ ಸಂಘದ ಸಂಯೋಜಕ ಡಾ.ಮನಮೋಹನ ಪ್ರಸ್ತಾವನೆಗೈದು, ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀವತ್ಸ ವಂದಿಸಿದರು. ವಿದ್ಯಾರ್ಥಿನಿ ಮನಿಷ ಶೆಟ್ಟಿ ಮತ್ತು ವಿದ್ಯಾರ್ಥಿ ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.