ಕುಡಿಪಾಡಿ ಗ್ರಾಮದಲ್ಲಿ ವಿವೇಕಾನಂದ ಸಂಸ್ಥೆಯಿಂದ ಕೃಷಿ ಉತ್ಸವ

ಪುತ್ತೂರು: ಕೃಷಿಯಲ್ಲಿ ವ್ಯಕ್ತಿಗತ ಸ್ವಾತಂತ್ರ್ಯ ಅಡಕವಾಗಿರುತ್ತದೆ. ಆದರೆ ನಗರೀಕರಣವೆಂಬ ಕಾಂಕ್ರೀಟ್ ಬದುಕಿನಿಂದ ಕೃಷಿಯೆಂಬ ಸಮೃದ್ಧ ಜೀವನ  ನಾಶವಾಗುತ್ತಿದೆ. ಹಳ್ಳಿಯ ಯುವಜನಾಂಗ ನಗರದತ್ತ ಮುಖಮಾಡುತ್ತಿದ್ದಾರೆ. ಕೃಷಿ ಭೂಮಿಗಳು ಪಾಳು ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಯುವಮನಸ್ಸುಗಳು ಚಿಂತಿಸುವುದು ಇಂದಿನ ಅಗತ್ಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕ್ಯೆಂ.ಕೃಷ್ಣ ಭಟ್ ಹೇಳಿದರು.

ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ವಿವೇಕಾನಂದ ಕಾಲೇಜಿನ ಗ್ರಾಮವಿಕಾಸ ಸಮಿತಿ ಹಾಗೂ ಕಾಲೇಜಿನ ಅನ್ಯಾನ್ಯ ಸಂಘಟನೆಗಳು ಹಾಗೂ ಸಿಟಿ ರೋಟರಿ ಕ್ಲಬ್ ನ ಸಂಯುಕ್ತ ಆಶ್ರಯದಲ್ಲಿ ಕೊಡಿಪ್ಪಾಡಿಯ ಶ್ರೀ ಲಕ್ಮ್ಷೀ ಜನಾರ್ದನ ಸ್ವಾಮಿ  ದೇವಸ್ಥಾನದ ಮುಂಬಾಗದ ಗದ್ದೆಯಲ್ಲಿ ನಡೆದ ಭತ್ತದ ಕೃಷಿ ಉತ್ಸವವನ್ನು ಗದ್ದೆಗೆ ಹಾಲೆರೆಯುವುದರ ಮೂಲಕ ಉದ್ಘಾಟಿಸಿ ಶನಿವಾರ ಮಾತನಾಡಿದರು.

ಪಟ್ಟಣಗಳ ಬೆಳವಣಿಗೆ ಮಾತ್ರವಲ್ಲ,  ಹಳ್ಳಿಗಳೂ ಬೆಳೆಯ ಬೇಕು. ಆಗ ಸಮತೋಲನ ಸಾಧ್ಯವಾಗುತ್ತದೆಆದರೆ ವಿಪರ್ಯಾಸವೆಂದರೆ ಇಂದು ಹಳ್ಳಿಗಳು ಲೇಔಟ್‌ಗಳ ತಾಣವಾಗುತ್ತಿವೆ. ಅಂತೆಯೇ ಪಟ್ಟಣದ ರೆಡಿಮೆಡ್ ಆಹಾರಗಳ ಹಾವಳಿ ಹಳ್ಳಿಗಳ ಮೇಲೆ ಆಗುತ್ತಿದೆ ಎಂದರು.

ಪುತ್ತೂರು ಸಿಟಿ ರೋಟರಿ ಕ್ಲಬ್‌ನ ಅಧ್ಯಕ್ಷ ಮನೋಹರ್ ಕೊಳಕಿಮಾರ್ ಮಾತನಾಡಿ ಮನಸ್ಸಿದ್ದರೆ ಮಾರ್ಗವೆಂಬಂತೆ ಆಸಕ್ತಿ ಇದ್ದರೆ ಹಳ್ಳಿಗಳನ್ನು ಉತ್ತಮ ರೀತಿಯಲ್ಲಿ ಬೆಳೆಸಬಹುದು. ಆದರೆ ಅದಕ್ಕೆ ಪ್ರತಿಯೊಬ್ಬರ ಉತ್ಸಾಹ ಮತ್ತು ಸಹಕಾರದ ಅಗತ್ಯವಿದೆ ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರ ಅನಂತ ಕೃಷ್ಣನಾಯಕ್ ಮಾತನಾಡಿ ಆಧುನಿಕ ಕೃಷಿ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡರೆ ಭತ್ತದ ಕೃಷಿ ಮಾಡುವುದು ಸರಳವಾಗುವುದು. ಕರ್ನಾಟಕದ ಬೇರೆ ಭಾಗಗಳಿಗೆ ಹೋಲಿಸಿದರೆ ಅಕ್ಕಿಯ ಅವಶ್ಯಕತೆ ಹೆಚ್ಚು ಇರುವುದು ದಕ್ಷಿಣಕನ್ನಡದವರಿಗೆ. ಏಕೆಂದರೆ ಅದುವೇ ಇಲ್ಲಿನ ಮೂಲ ಆಹಾರ ಎಂದು ನುಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವಿದ್ಯಾರ್ಥಿಗಳಿಗೆ ಶ್ರಮದ ಬದುಕು ಅಗತ್ಯ. ಇಂದಿನ ವಿದ್ಯಾರ್ಥಿಗಳೆ ಮುಂದೆ ಕೃಷಿಯನ್ನು ಮಾಡಬೇಕಾದವರು. ಅದಕ್ಕಾಗಿ ಅವರು ವಿದ್ಯಾರ್ಥಿ ದೆಸೆಯಲ್ಲೇ ಸಜ್ಜಾಗಬೇಕು.  ಜೀವನ  ಸದಾ ನಾವಂದುಕೊಂಡಂತೆ ಇರುವುದಿಲ್ಲ. ಹಾಗಾಗಿ ಬರುವ ಸವಾಲುಗಳನ್ನು  ಎದುರಿಸಲು  ಸಿದ್ದರಾಗಬೇಕೆಂದರೆ ಎಲ್ಲಾ ರೀತಿಯ ಕೆಲಸ ಕಾರ್ಯಗಳಲ್ಲಿ ತಿಳಿವಳಿಕೆ ಇರಬೇಕು ಎಂದರು.

ಕೊಡಿಪ್ಪಾಡಿ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಸುಕುಮಾರ ಅಧ್ಯಕ್ಷತೆ ವಹಿಸಿ ಶುಭ ನುಡಿದರು. ಕಾಲೇಜಿನ ಗ್ರಾಮವಿಕಾಸ  ಸಮಿತಿಯ ಸಂಯೋಜಕ ಡಾ.ಶ್ರೀಶ ಕುಮಾರ್ ಎಂ.ಕೆ ಸ್ವಾಗತಿಸಿ ಪ್ರಸ್ಥಾವಿಸಿದರು. ಕಾರ್ಯದರ್ಶಿ ಮನ್ಮಥ ಶೆಟ್ಟಿ ವಂದಿಸಿದರು. ಕಾಲೆಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ರೋಹಿನಾಕ್ಷ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಒಂದು ಮುಡಿ ಭತ್ತ ಬೆಳೆಯುವ ಹಿನ್ನಲೆಯಲ್ಲಿ ನಾಟಿ ಮಾಡಲಾಯಿತು.