ಜಿ.ಎಸ್.ಟಿ.ಯಿಂದಾಗಿ ಆರ್ಥಿಕ ಶಿಸ್ತು : ಡಾ. ಶ್ರೀಪತಿ ಕಲ್ಲೂರಾಯ

ಪುತ್ತೂರು: ದೇಶದ ಅಭಿವೃದ್ಧಿಗಾಗಿ ಸಾರ್ವಜನಿಕ ಶಿಸ್ತು ಅಗತ್ಯವಿದೆ. ಅದರಲ್ಲಿ ತೆರಿಗೆ ನೀತಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಾದ್ಯಂತ ಜಿ.ಎಸ್.ಟಿ. ಎಂಬ ಏಕರೂಪ ತೆರಿಗೆ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಆ ಮೂಲಕ ಸಾರ್ವಜನಿಕ ಜೀವನದಲ್ಲಿ ಆರ್ಥಿಕ ಶಿಸ್ತು ಸ್ಥಾಪನೆಯಾಗುತ್ತಿದೆ. ಜಿಇ.ಎಸ್.ಟಿ. ಜಾರಿಗೆ ತಂದಿರುವುದು ಸೂಕ್ತ ಸಮಯದಲ್ಲಿ ಸರ್ಕಾರ ಕೈಗೊಂಡ ಸೂಕ್ತ ನಿರ್ಧಾರವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತ್ತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರೋಫೆಸರ್ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ತುಳು ಸಂಘ, ವಿ.ಸಿ.ಆರ್.ಎಸ್. ಹಾಗೂ ಯೂತ್ ರೆಡ್‌ಕ್ರಾಸ್ ಯುನಿಟ್ ಜಂಟಿಯಾಗಿ ಆಯೋಜಿಸಿದ ಗೂಡ್ಸ್ ಆಂಡ್ ಸರ್ವೀಸ್ ಟ್ಯಾಕ್ಸ್ ಮಾಹಿತಿ ಕಾರ್‍ಯಾಗಾರಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿ  ಗುರುವಾರ ಮಾತನಾಡಿದರು.

ಸರ್ಕಾರದ ಮುಖ್ಯ ಆದಾಯವೇ ಸಾರ್ವಜನಿಕ ತೆರಿಗೆ. ಸರಿಯಾಗಿ ತೆರಿಗೆ ಪಾವತಿಯಾದಾಗ ಸರ್ಕಾರಕ್ಕೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಬಂಡವಾಳ ದೊರಕುತ್ತದೆ. ಈ ಹಿಂದೆ ತೆರಿಗೆ ವಂಚನೆ ಸಾಮಾನ್ಯವಾಗಿತ್ತು. ಕಾಳಧನಿಕರು, ಭ್ರಷ್ಟಾಚಾರ ಅಧಿಕವಾಗಿತ್ತು. ಆದರೆ ನೂತನ ತೆರಿಗೆ ನೀತಿ ಜಿ.ಎಸ್.ಟಿ. ಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಪ್ಪುಹಣ ಸಂಗ್ರಹ ಸುಲಭ ಸಾಧ್ಯವಲ್ಲ. ಉಳ್ಳವರಿಗೆ ತೊಂದರೆಯಾಗದಂತೆ ಅವರಿಂದ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಒಳಿತನ್ನು ಮಾಡುವ ಕಾರ್ಯ ನಡೆಯುತ್ತದೆ. ಜಿ.ಎಸ್.ಟಿ. ವ್ಯವಸ್ಥೆಯಲ್ಲಿ ಪಾವತಿ ಹೆಚ್ಚಾಗಿ ಆನ್‌ಲೈನ್ ಮೂಲಕ ನಡೆಯುವುದರಿಂದ ತಪ್ಪುಗಳಿಗೆ ಅವಕಾಶ ಕಡಿಮೆ. ವ್ಯವಹಾರವನ್ನು ಸುಲಭವಾಗಿ ಕಾಯ್ದಿಡಲು ಸಾಧ್ಯ ಎಂದು ಜಿ.ಎಸ್.ಟಿ. ಬಗೆಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಭಾರತ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವಾದುದರಿಂದ ಯಾವುದೇ ಒಂದು ಹೊಸ ಕಾನೂನನ್ನು ಜಾರಿಗೊಳಿಸಿ, ಕಾರ್ಯಗತ ಮಾಡುವುದು ಸುಲಭದ ಮಾತಲ್ಲ. ಅಲ್ಲದೆ ನಮ್ಮ ದೇಶದ ಅರ್ಥವ್ಯವಸ್ಥೆ ಹಲವಾರು ಏರಿಳಿತಗಳನ್ನು ಕಂಡಿದೆ. ಆರಂಭದಲ್ಲಿ ಗೊಂದಲ ಸಹಜ. ಆದರೆ ಅದರ  ಮಹತ್ವ ಹಾಗೂ ಉಪಯೋಗವನ್ನು ತಿಳಿದಾಗ ಅನುಮಾನಗಳು ತಿಳಿಯಾಗುತ್ತವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ, ಯಾವುದೇ ಒಂದು ಹೊಸ ನೀತಿ ಜಾರಿಯಾದಾಗ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. ಜಿ.ಎಸ್.ಟಿ. ಮೂಲಕ ಸರ್ಕಾರ ಕಾಳಸಂತೆಯ ವ್ಯವಹಾರಕ್ಕೆ ಕಡಿವಾಣ ಹಾಕಿದೆ. ಅದರ ಬಗೆಗಿನ ಮಾಹಿತಿ ಪ್ರತಿಯೊಬ್ಬರಿಗೂ ಅಗತ್ಯವಿದೆ. ಜಿ.ಎಸ್.ಟಿ. ಬಗೆಗಿನ ಜ್ಞಾನ ಉದ್ಯೋಗ ದೃಷ್ಟಿಯಿಂದಲೂ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಮ್.ಟಿ. ಜಯರಾಮ್ ಭಟ್ ಮಾತನಾಡಿ, ಸರ್ಕಾರದ ಖಜಾನೆ ತುಂಬಿದಾಗ ಸಾರ್ವಜನಿಕ ಅಭಿವದ್ಧಿ ಸಾಧ್ಯ. ಅಂತರಾಷ್ಟ್ರಿಯವಾಗಿ ನಮ್ಮ ದೇಶ ಮಾಡಿದ ಸಾಲದ ಹೊರೆಯೂ ಕಡಿಮೆಯಾಗುತ್ತದೆ. ಇದೆಲ್ಲ ಸಾಧ್ಯವಾಗುವುದು ನಿಯಮಿತವಾಗಿ ಯಾವುದೇ ವಂಚನೆ ಮಾಡದೆ ತೆರಿಗೆಗಳು ಸಲ್ಲಿಕೆಯಾದಾಗ ಮಾತ್ರ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿನಿ ಪ್ರಥಮಾ ಉಪಾಧ್ಯಾಯ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಆಶಾ ಸ್ವಾಗತಿಸಿ, ಸಿಂಚನ ವಂದಿಸಿದರು. ಜೆನ್ನಿಫರ್ ಮೊರಸ್ ಕಾರ್ಯಕ್ರಮ ನಿರೂಪಿಸಿದರು.