ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಅದ್ದೂರಿ ಸ್ವಾತಂತ್ರ್ಯೋತ್ಸವ – ಸ್ವಾತಂತ್ರ್ಯ ದಿನ ರಜಾದಿನವಲ್ಲ, ಅದು ಪ್ರಜಾದಿನ : ಡಾ.ಕೆ.ಎಂ.ಕೃಷ್ಣ ಭಟ್

ಪುತ್ತೂರು: ಸ್ವಾತಂತ್ರಯೋತ್ಸವ ಎಂದರೆ ರಜಾದಿನವಲ್ಲ. ಅದು ನಿಜಾರ್ಥದಲ್ಲಿ ಪ್ರಜಾದಿನ. ಈ ವಿಚಾರವನ್ನು ಅರಿಯದೆ ಸ್ವಾತಂತ್ರ್ಯ ದಿನದಂದು ವಿಹಾರ ಹೋಗುವುದಕ್ಕಾಗಿ ಮೀಸಲಿರಿಸುವವರಿದ್ದಾರೆ. ಸ್ವಾತಂತ್ರ್ಯವೆಂದರೆ ಸ್ವೇಚ್ಚೆಯಲ್ಲ. ಅದು ಅನೇಕ ವಿಚಾರಗಳನ್ನು ಮನನ ಮಾಡಲಿರುವ, ನೆನಪಿಸಿಕೊಳ್ಳಲು ನಿಗದಿಪಡಿಸಲಾಗಿರುವ ದಿನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.

ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನೆಹರುನಗರದ ವಿವೇಕ ಕ್ರೀಡಾಂಗಣದಲ್ಲಿ ೭೨ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದ್ವಜಾರೋಹಣಗೈದು ಬುಧವಾರ ಮಾತನಾಡಿದರು.

ಸ್ವಾತಂತ್ರ್ಯಾನಂತರದ ಸರ್ಕಾರ ಸ್ವಾತಂತ್ರ್ಯ ಹೋರಾಟದ ಬಗೆಗಿನ ಒಂದು ಮುಖವನ್ನಷ್ಟೇ ಪರಿಚಯಿಸಲು ಆಸಕ್ತಿ ತೋರಿತೇ ವಿನಃ ಬಲಿದಾನಗೈದವರ ಅಥವ ಕ್ರಾಂತಿಕಾರಿಗಳ ಪ್ರಯತ್ನಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದು ದುರದೃಷ್ಟಕರ. ಸರಿಸುಮಾರು ಒಂದು ತಲೆಮಾರಿಗೆ ಕ್ರಾಂತಿಕಾರಿಗಳನ್ನು ತೋರಿಸದಿರುವ ಮೂಲಕ ಶಾಶ್ವತವಾಗಿ ಅವರನ್ನು ಬದಿಗೆ ತಳ್ಳುವ ಕಾರ್ಯವೂ ನಡೆಯಿತು. ಆದರೆ ದೇಶಕ್ಕಾಗಿ ಪ್ರಾಣ ತೆತ್ತವರನ್ನು ಮರೆಯುವುದು ಕೃತಘ್ನತೆಯಾಗುತ್ತದೆ. ಹಾಗಾಗಿ ಸ್ವಾತಂತ್ರ್ಯ ದಿವಸದಂದು ಹೊಸ ತಲೆಮಾರಿಗೆ ಇಂತಹ ವಿಚಾರಗಳನ್ನು ತಿಳಿಸುವ ಕಾರ್ಯವೂ ಆಗಬೇಕು ಎಂದರು.

ಸ್ವಾತಂತ್ರ್ಯ ಮತ್ತೆ ನಮ್ಮ ತೆಕ್ಕೆಗೆ ಬಂದದ್ದು ಖುಷಿಯ ಸಂಗತಿಯಾದರೂ ಆ ಸಂದರ್ಭದಲ್ಲಿ ಅಖಂಡವಾಗಿದ್ದ ಭಾರತ ತ್ರಿಖಂಡವಾದದ್ದು ದುರದೃಷ್ಟಕರ. ಆದರೆ ಮತ್ತೊಮ್ಮೆ ಭಾರತ ಅಖಂಡವಾಗಿ ಹೊರಹೊಮ್ಮಬೇಕೆಂದು ಸಂಕಲ್ಪಿಸುವ ದಿನವಾಗಿ ಸ್ವಾಂತ್ರ್ಯ ದಿನ ಮೂಡಿಬರಬೇಕು. ಹಾಗೂ ಹಾಗೆ ಭಾರತ ತುಂಡಾಗುವ ಸಂದರ್ಭದಲ್ಲಿ ಜೀವತೆತ್ತ ಮುಗ್ಧರನ್ನು ನೆನೆಯುವ ಕಾರ್ಯವೂ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ವಿವಿಧ ವಿವೇಕಾನಂದ ಸಂಸ್ಥೆಗಳ ಆಡಳಿತ ಮಂಡಳಿ ಹಿರಿಯರು, ಪ್ರಾಂಶುಪಾಲರು, ಪ್ರಾಧ್ಯಾಪಕರು, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು. ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಧ್ವಜಗೀತೆ, ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು. ಎನ್.ಸಿ.ಸಿ, ಎನ್ ಎಸ್ ಎಸ್ ರೋವರ್ ಅಂಡ್ ರೇಂಜರ್‍ಸ್ ಮತ್ತು ರೆಡ್ ಕ್ರಾಸ್ ವಿದ್ಯಾರ್ಥಿಗಳು ವಿಶೇಷ ಮೆರುಗು ನೀಡಿದರು. ಸುಮಾರು ಎಂಟು ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು. ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಕಾರ್ಯಕ್ರಮ ನಿರ್ವಹಿಸಿದರು.