ವಿವೇಕಾನಂದ ಕಾಲೇಜಿನಲ್ಲಿ ಟೆಕ್ನೋ ತರಂಗ್ – 2017 ಉದ್ಘಾಟನೆ – ಇಂದಿನ ಸಾಧನೆಗೆ ಹಿಂದಿನ ಜ್ಞಾನ ಕಾರಣ : ಶ್ರೀಮುಖ

ಪುತ್ತೂರು: ಕಾಲೇಜು ಜೀವನದಲ್ಲಿ ಕೇವಲ ಪಠ್ಯದಿಂದಷ್ಟೇ ಕಲಿತುಕೊಂಡರೆ ಸಾಲದು. ಬದಲಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಜ್ಞಾನ ವಿಸ್ತಾರಗೊಳ್ಳುತ್ತದೆ. ನಮ್ಮ ಇಂದಿನ ಸಾಧನೆಗೆ ಹಿಂದಿನ ಅನುಭವ ಕಾರಣವಾದರೆ ನಾಳಿನ ಸಾಧನೆಗೆ ಇಂದಿನ ಅನುಭವ ಕಾರಣವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಅನುಭವಿ ಅಭ್ಯರ್ಥಿಗಳಿಗಿಂತ ಹೊಸತಾಗಿ ಉದ್ಯೋಗ ಕ್ಷೇತ್ರಕ್ಕೆ ಬರುವವರಿಗೇ ಹೆಚ್ಚಿನ ಕೌಶಲ್ಯ ಇರುತ್ತದೆ, ಇದಕ್ಕೆ ಕಾರಣ ಕಾಲೇಜು ಜೀವನದಲ್ಲಿ ಗಳಿಸಿಕೊಂಡ ಅನುಭವ ಎಂದು ಸುಳ್ಯದ ಸಿ-ಕೆ ಸಂಸ್ಥೆಯ ಸಂಸ್ಥಾಪಕ, ಯುವ ಉದ್ಯಮಿ ಶ್ರೀಮುಖ ಹೇಳಿದರು.

News Photo - Shreemukha

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಹತ್ತನೇ ವರ್ಷದ ಐಟಿ ಫೆಸ್ಟ್ – ಟೆಕ್ನೋ ತರಂಗ್-೨೦೧೭ ಅನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಉದ್ಯೋಗದಾತರು ಯಾವಾಗಲೂ ತನ್ನ ಉದ್ಯೋಗಿಗಳಿಂದ ತನಗಾಗುವ ಪ್ರಯೋಜನವನ್ನು ಲೆಕ್ಕ ಹಾಕುತ್ತಿರುತ್ತಾರೆ. ಹಾಗಾಗಿ ಕೇವಲ ಅಂಕಪಟ್ಟಿಯಲ್ಲಿ ಸಾಧಕರಾದರೆ ಸಾಲದು, ಬದಲಾಗಿ ನಾವು ಎಷ್ಟು ಕ್ರಿಯಾಶೀಲರು ಹಾಗೂ ಸೃಜನಶೀಲರು ಎಂಬುದು ಮುಖ್ಯವಾಗುತ್ತದೆ. ಆದ್ದರಿಂದ ಕಾಲೇಜು ಜೀವನವನ್ನು ಪಠ್ಯದಾಚೆಗೂ ನಮ್ಮಷ್ಟಕ್ಕೇ ಕಲಿಯುವ ಸಮಯವಾಗಿ ಕಾಣಬೇಕು. ನಮ್ಮ ಪ್ರತಿಯೊಂದು ಅನುಭವಗಳೂ ನಾಳಿನ ಯಶಸ್ಸಿಗೆ ಕಾರಣವಾಗುತ್ತವೆ ಎಂದು ನುಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಸ್ಪರ್ಧೆಗಳನ್ನು ಆಯೋಜನೆ ಮಾಡಿದಾಗ ಸ್ಪರ್ಧಿಗಳಿಗೆ ಮಾತ್ರವಲ್ಲದೆ ಆಯೋಜಕರಿಗೂ ಅನೂಹ್ಯವಾದ ಅನುಭವ ದೊರಕುತ್ತದೆ. ತನ್ಮೂಲಕ ನಾಳಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳಿಗೆ ಇದು ಅನುವು ಮಾಡಿಕೊಡುತ್ತದೆ. ಹಾಗಾಗಿ ಸ್ಪರ್ಧೆಗಳನ್ನು ಆಯೋಜಿಸುವುದು ಅತ್ಯಂತ ಅಗತ್ಯ. ನಮ್ಮಲ್ಲಿನ ಕುಶಲತೆಯನ್ನು ವೃದ್ಧಿಸುವಲ್ಲಿ ಸ್ಪರ್ಧೆಗಳು ಸಹಕಾರಿ ಎಂದರು.

ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಮಾತನಾಡಿ ತಾಂತ್ರಿಕತೆ ಅನ್ನುವುದು ಅನಿವಾರ್ಯತೆಯ ಯಾನ. ಇಡಿಯ ಜಗತ್ತೇ ತಾಂತ್ರಿಕವಾಗಿ ಬದಲಾಗುತ್ತಿದೆ. ತಾಂತ್ರಿಕ ಸಮರ ಜಗತ್ತಿನಾದ್ಯಂತ ಸನ್ನಿಹಿತವಾಗುತ್ತಿರುವಂತೆ ಭ್ರಮೆ ಹುಟ್ಟುತ್ತಿದೆ. ಈ ಹಿನ್ನೆಲೆಯಲ್ಲಿ ಯುವ ಸಮೂಹ ಹೆಚ್ಚಿನ ಆಸಕ್ತಿಯಿಂದ ಕಾರ್ಯಶೀಲರಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ ವಿದ್ಯಾರ್ಥಿಗಳು ಉದ್ಯೋಗಾಕಾಂಕ್ಷಿಗಳಾಗುವುದಕ್ಕಿಂತ ಉದ್ಯೋಗದಾತರಾಗುವ ಬಗೆಗೆ ಆಲೋಚಿಸಬೇಕು. ಪ್ರತಿಯೊಬ್ಬರಿಗೂ ಯಶಸ್ಸನ್ನು ತನ್ನದಾಗಿಸಿಕೊಳ್ಳುವ ಯೋಗ್ಯತೆ ಇದೆ. ಇದನ್ನು ಅರಿತುಕೊಳ್ಳಬೇಕಾಗಿದೆ ಎಂದರು.

ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು. ಐಟಿ ಕ್ಲಬ್ ಸಂಯೋಜಕ ವಿಕ್ರಾಂತ್ ಪ್ರಸ್ತಾವಿಸಿ, ಸ್ವಾಗತಿಸಿದರು. ಐಟಿ ಕ್ಲಬ್ ಅಧ್ಯಕ್ಷೆ, ವಿದ್ಯಾರ್ಥಿನಿ ಪೌರ್ಣಮಿ ವಂದಿಸಿದರು. ವಿದ್ಯಾರ್ಥಿನಿ ಶ್ರೇಯಾ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವವಿದ್ಯಾನಿಲಯ ವ್ಯಾಪ್ತಿಯ 23 ಕಾಲೇಜುಗಳಿಂದ ಇನ್ನೂರೈವತ್ತಕ್ಕೂ ಮಿಕ್ಕ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು.