ಪತ್ರಕರ್ತರಿಗೆ ಮನಃಶಾಸ್ತ್ರದ ಜ್ಞಾನ ಅತ್ಯಂತ ಮುಖ್ಯ : ಲಕ್ಷ್ಮೀಶ ಭಟ್

ಪುತ್ತೂರು: ಪತ್ರಕರ್ತರಾಗುವವರು ಮನಃಶಾಸ್ತ್ರದ ಬಗೆಗೆ ತಿಳಿದುಕೊಳ್ಳಬೇಕಾದ್ದು ಅನಿವಾರ್ಯ. ಯಾಕೆಂದರೆ ಅನೇಕ ಸಂದರ್ಭಗಳಲ್ಲಿ ವಸ್ತು, ವಿಷಯ, ಜೀವಗಳನ್ನು ಕಳೆದುಕೊಂಡಿರುವ ವ್ಯಕ್ತಿಗಳನ್ನು ಮಾತನಾಡಿಸುವ ಸಂದರ್ಭವೂ ಬರುತ್ತದೆ. ಆಗ ಅಂತಹವರನ್ನು ಮಾತನಾಡಿಸಲೂ ಬೇಕು, ಜತೆಗೆ ಸಾಂತ್ವನವನ್ನೂ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಆಗ ಮನಃಶಾಸ್ತ್ರದ ಕುರಿತಾದ ಹಿಡಿತ ಉಪಯೋಗಕ್ಕೆ ಬರುತ್ತದೆ  ಎಂದು ಉಡುಪಿಯ ಯೋಗದೀಪಿಕಾ ವಿದ್ಯಾಪೀಠದ ಪ್ರಾಧ್ಯಾಪಕ ಲಕ್ಷ್ಮೀಶ್ ಭಟ್ ಅಲುಂಬೆ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳು ಆಯೋಜಿಸುವ ’ಜನ-ಮನ’ ಎಂಬ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ಪತ್ರಿಕೋದ್ಯಮ ಎನ್ನುವುದು ಜವಬ್ದಾರಿಯುತ ವರ್ತನೆಯನ್ನು ಬಯಸುವ ಕ್ಷೇತ್ರ. ಪತ್ರಕರ್ತ ಅರಿವಿಲ್ಲದೇ ಮಾಡುವ ಒಂದು ತಪ್ಪಿನಿಂದ ಸಮಾಜದಲ್ಲಿ ದೊಡ್ಡ ಪ್ರಮಾದವೇ ಉಂಟಾಗಬಹುದು. ಸರಿಯಾದ ಮಾಹಿತಿಯನ್ನು ಪಡೆದು ಸುದ್ದಿ ಮಾಡುವುದು ಅತೀ ಅಗತ್ಯ ಮನೋಶಾಸ್ತ್ರ ಹಾಗೂ ಪತ್ರಿಕೋದ್ಯಮದ ನಡುವೆ ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಅನೇಕ ಸಂದರ್ಭಗಳಲ್ಲಿ ಪತ್ರಕರ್ತ ಜನರ ಮನಸ್ಸನ್ನು ಅರ್ಥೈಸಿಕೊಂಡು ಮುನ್ನಡೆಯುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತರೆನಿಸಿಕೊಂಡವರು ಸಮಾಜಕ್ಕೆ ಬಾಧ್ಯಸ್ಥರು. ಅವರು ವಸ್ತು-ಸ್ಥಿತಿಯನ್ನು ಅರಿತುಕೊಂಡು ನಡೆಯಬೇಕಾದ ಅವಶ್ಯಕತೆಯಿದೆ. ಸಮಾಜದಲ್ಲಿ ಪ್ರಮುಖರೆನಿಸಿಕೊಂಡವರನ್ನು ಸಂದರ್ಶಿಸಿದರೆ ಸಾಲದು. ಜನ ಸಾಮಾನ್ಯರನ್ನೂ ಮಾತನಾಡಿಸುವುದು, ಅವರ ಭಾವನೆಗಳಿಗೂ ಅವಕಾಶ ಕಲ್ಪಿಸುವುದು ಮುಖ್ಯವೆನಿಸುತ್ತದೆ ಎಂದು ನುಡಿದರು.

ಪ್ರಸ್ತಾವನೆಗೈದ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಜನ ಮನ ಅನ್ನುವುದು ವಿಶೇಷ ಸರಣಿ ಕಾರ್ಯಕ್ರಮ. ಇದು ಜನ ಸಾಮಾನ್ಯರಿಂದ ತೊಡಗಿ ಎಲ್ಲಾ ವರ್ಗದ, ಹಂತದ ಜನರ ಅನುಭವದ ವೇದಿಕೆಯಾಗಲಿದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸದ ವಿಚಾರ ಯಾವುದೂ ಇಲ್ಲ. ಹಾಗಾಗಿ ಪತ್ರಿಕೋದ್ಯಮ ಅಧ್ಯಯನ ಸಂದರ್ಭದಲ್ಲೇ ಬೇರೆ ಬೇರೆ ಅನುಭವಗಳಿಗೆ ಕಿವಿಯಾಗುವ ದೃಷ್ಟಿಯಿಂದ ಈ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಸಮಾಜದ ನಾನಾ ಮಂದಿಯಲ್ಲಿ ಬೇರೆ ಬೇರೆ ವಿಧದ ಜ್ಞಾನಗಳಿವೆ. ಅವುಗಳನ್ನು ನಮ್ಮದಾಗಿಸುವ ಹಿನ್ನೆಲಯಲ್ಲಿ ಜನ-ಮನ ವೇದಿಕೆಯಾಗಬೇಕುಲ್ಲರಿಂದಲೂ ತಿಳಿಯುವುದಿದೆ ಅನ್ನುವುದು ಸತ್ಯವೇ. ಪತ್ರಕರ್ತರು ವಿವಿಧ ಕ್ಷೇತ್ರದ ಬಗೆಗೆ ತಿಳಿದುಕೊಳ್ಳಬೇಕಾದ್ದು ಮುಖ್ಯ. ಹಾಗಾದಾಗ ಮಾತ್ರ ಉತ್ತಮ ಪರ್ತಕರ್ತರಾಗಿ ರೂಪುಗೊಳ್ಳಬಹುದು ಎಂದರಲ್ಲದೆ ಸಮಾಜದ ವಿವಿಧಜನರ ಸಂಪರ್ಕ ದೊರೆಯುತ್ತಾ ಹೋದಂತೆ ನಮ್ಮ ಮಸ್ತಕದಲ್ಲಿ ಸಮಾಜದ-ಸಮಾಚಾರಗಳ ಕುರಿತ ತಿಳುವಳಿಕೆ ಶೇಖರಣೆಯಾಗುತ್ತದೆ. ಅದು ಶಾಶ್ವತವಾದ ಜ್ಞಾನ ಸಂಪತ್ತು ಎಂದು ತಿಳಿಸಿದರು.

ವೇದಿಕೆಯಲ್ಲಿ ವಿಭಾಗದ ಉಪನ್ಯಾಸಕಿ ಭವ್ಯಾ ಪಿ. ಆರ್ ನಿಡ್ಪಳ್ಳಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಲಿಖಿತಾ ಪ್ರಾರ್ಥಿಸಿ, ಅಕ್ಷಯ್‌ಕುಮಾರ್ ಪಲ್ಲಮಜಲು ಸ್ವಾಗತಿಸಿದರು. ವಿದ್ಯಾರ್ಥಿ ಅಕ್ಷಿತ್ ಜೋಗಿ ವಂದಿಸಿದರು. ರಾಕೇಶ್ ನಾಯಕ್ ನಿರೂಪಿಸಿದರು.