ಕೃಷಿಬದುಕಿನಲ್ಲಿ ಮನಸ್ಸಿಗೆ ಸಂತೋಷ ಸಾಧ್ಯ: ಡಾ.ಮನಮೋಹನ್

ಪುತ್ತೂರು: ಕೃಷಿಯನ್ನು ಲಾಭಕ್ಕಾಗಿ ಮಾಡುವ ಉದ್ದೇಶ ಇರಬಾರದು ಬದಲಾಗಿ ಮನಸ್ಸಿನ ಸಂತೋಷಕ್ಕಾಗಿ ಮಾಡಬೇಕು. ವ್ಯವಸಾಯದಿಂದ ದೊರಕುವ ಅನುಭವಗಳು ಉತ್ತಮ ಜೀವನವನ್ನು ಕಟ್ಟಿಕೊಡುತ್ತವೆ. ಕೃಷಿ ಎಂದರೆ ಒಂದು ರೀತಿಯ ಪುಳಕಿತಗೊಳ್ಳುವ ಸಂಗತಿಯಾಗಬೇಕು ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ  ಡಾ.ಮನಮೋಹನ್ ಎಂ ಹೇಳಿದರು.

ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿಭಾಗದ ವಿಭಾಗದ ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ  ಭಾಗವಹಿಸಿ ನೆಲದೊಂದಿಗಿನ ಬದುಕು ಎಂಬ ವಿಷಯದ ಕುರಿತು ಗುರುವಾರ ಮಾತನಾಡಿದರು.

ಕೃಷಿ ಮತ್ತು ನೆಲಗಳ ಜೊತೆಗಿನ ಸಂಬಂಧವನ್ನು ಶಬ್ದಗಳ ಮೂಲಕ ವರ್ಣಿಸಲು ಸಾದ್ಯವವಿಲ್ಲ. ಗ್ರಾಮೀಣ ಭಾಗದ ಕೃಷಿಯ ಸೊಗಡು ಜೀವನದಲ್ಲಿ ಮರೆಯಲಾಗದ ಅನುಭವಗಳನ್ನು ಕಟ್ಟಿಕೊಡುತ್ತದೆ. ನವೀನ ಬಗೆಯ ಕೃಷಿಯಲ್ಲಿ ಲಾಭವಿರಲಿ ನಷ್ಟವಿರಲಿ ಅದು ಜೀವನಕ್ಕೆ ಪಾಠವಾಗುವುದು ಖಚಿತ. ನಮಗೆ ಬೇಕಾದ ದಿನ ಬಳಕೆಯ ತರಕಾರಿಗಳನ್ನು ನಾವೇ ಸ್ವತಃ  ಬೆಳೆದರೆ ಅದರಲ್ಲಿ ದೊರಕುವ ಸಂತೋಷವನ್ನು ವರ್ಣಿಸುವುದು ಅಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅರುಣ್, ದೀಕ್ಷಿತ, ರಾಮ್‌ಕಿಶನ್ ವಿನೀತ, ಜಯಶ್ರೀ, ಸುತನ್, ಚರಿಷ್ಮ, ಗೌತಮ್, ಪ್ರಶಾಂತ್, ಶಶಿಧರ, ಸೌಜನ್ಯ , ಗಗನ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ವಿಭಾಗದ ವತಿಯಿಂದ ಹೊರತರಲಾಗುತ್ತಿರುವ ಕೃಷಿ-ಖುಷಿ ಎಂಬ ವೀಡಿಯೋ ಅವತರಣಿಕೆಯ ಪ್ರೋಮೊವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ,  ವಿಭಾಗದ ಉಪನ್ಯಾಸಕಿ ಭವ್ಯ.ಪಿ.ಆರ್ ನಿಡ್ಪಳ್ಳಿ ಮತ್ತು ವೇದಿಕೆಯ ಕಾರ್ಯದರ್ಶಿ ಮೇಘ ಎಚ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೇಘ ಸ್ವಾಗತಿಸಿ, ವಿದ್ಯಾರ್ಥಿನಿ ಕಾವ್ಯಶ್ರಿ ಭಟ್ ವಂದಿಸಿದರು. ವಿದ್ಯಾರ್ಥಿನಿ ಹರ್ಷಿತ ಕಾರ್ಯಕ್ರಮ ನಿರ್ವಹಿಸದರು.