ವಿವೇಕಾನಂದದಲ್ಲಿ ನಾಯಕತ್ವ ತರಬೇತಿ ಶಿಬಿರ

ಪುತ್ತೂರು: ನಾಯಕತ್ವದ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಇದು ಇನ್ನೊಬ್ಬರಿಗೆ ಕೆಲಸವನ್ನು ಹೇಳುವುದಕ್ಕಾಗಿ ಅಲ್ಲ. ಬದಲಾಗಿ ನಾವು ಯಶಸ್ವಿಯಾಗಲು ಅದರಿಂದ ಸಹಾಯವಾಗುತ್ತದೆ. ನಾಯಕತ್ವದ ಗುಣ ನಮಗೆ ಕಷ್ಟದ ಪರಿಸ್ಥಿತಿ ಬಂದಾಗ ಎದುರಿಸಲು ದಾರಿ ತೋರುತ್ತದೆ. ನಮ್ಮಲ್ಲಿರುವ ಅಂತಹ ಕೌಶಲ್ಯ ಮುಂದೆ ಉದ್ಯೋಗದ ಸಮಯದಲ್ಲಿ ಸಹಕಾರಿಯಾಗುತ್ತದೆ ಎಂದು ಎಮ್ ಆರ್ ಪೈ ಫೌಂಡೇಷನ್‌ನ  ಸಚಿನ್ ಕಾಮತ್ ಹೇಳಿದರು.

ಅವರು ವಿವೇಕಾನಂದ ಕಾಲೇಜಿನಲ್ಲಿ ಎಮ್.ಆರ್ ಪೈ ಫೌಂಡೇಶನ್ ವತಿಯಿಂದ ಆಯೋಜನೆಗೋಂಡ ನಾಯಕತ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು. ನಮ್ಮಲ್ಲಿರುವ ಜ್ಞಾನದ ಸದ್ಬಳಕೆ ನಾಯಕತ್ವದ ಗುಣಕ್ಕೆ ಸಹಕಾರಿಯಾಗುತ್ತದೆ. ನಮ್ಮಲ್ಲಿರುವ ಕೌಶಲ್ಯ ನಮಗೆ ಮಾತ್ರ ಸೀಮಿತವಾಗದೆ ಅದು ಹೊರಬರುವಲ್ಲಿ ನಾಯಕತ್ವ ಗುಣ ಸಹಕಾರಿಯಾಗುತ್ತದೆ ಎಂದರು.

ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ನಾಯಕತ್ವದ ಬೆಳವಣಿಗೆಗೆ ವಿವಿಧ ಕಾರ್ಯಕ್ರಮಗಳು ಅವಶ್ಯಕ. ಕಲಿಕೆಯೊಂದು ಖಜಾನೆ ಇದ್ದಂತೆ. ಕಲಿಕೆ ಇಂದು ಕಹಿಯಾಗಿರಬಹುದು. ಆದರೆ ಕಾಲಕ್ರಮೇಣವಾಗಿ ಜೀವನದಲ್ಲಿ ಸಿಹಿಯಾಗಿ ಮಾರ್ಪಾಡಗುತ್ತದೆ. ವಿಷಯವನ್ನು ಹುಡುಕಿ ಕಲಿತು ಅದನ್ನು ಕಾರ್ಯರೂಪಕ್ಕೆ ತರುವುದು ನಾಯಕತ್ವದ ಗುಣ. ಅವಕಾಶಗಳನ್ನು ನಾವೇ ಸೃಷ್ಟಿಸಬೇಕು. ಇದಕ್ಕಾಗಿ ಮಾರ್ಗದರ್ಶನ ಅಗತ್ಯ ಎಂದರು.

ಎಮ್.ಆರ್ ಪೈ ಫೌಂಡೇಶನ ಕ್ಲೆರಿಸ್ಸಾ ಜತನ್ನಾ ಉಪಸ್ಥಿತರಿದ್ದರು. ಉಪನ್ಯಾಸಕಿ ರೇಖಾ ಸ್ವಾಗತಿಸಿದರು. ಉಪನ್ಯಾಸಕಿ ಜೀವಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.