ಸುಳ್ಳೇ ಜೀವನವಾಗದಿರಲಿ : ಡಾ. ವಿಷ್ಣುಕುಮಾರ್

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ನಾವು ಅನೇಕ ಸುಳ್ಳುಗಳನ್ನು ಹೇಳಿರುತ್ತೇವೆ. ಜೀವನದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಸುಳ್ಳು ಹೇಳುವುದು ಅಪರಾಧವಲ್ಲ. ಆದರೆ ಸುಳ್ಳೇ ಜೀವನವಾಗದಿರಲಿ. ಸುಳ್ಳು ಹೇಳುವ ಮೊದಲು ಸಮಯ ಸಂದರ್ಭ ನೆನಪಿನಲ್ಲಿರಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ವಿಷ್ಣುಕುಮಾರ್ ಹೇಳಿದರು.

ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಒಂದು ಸುಳ್ಳಿನ ಕಥೆ ಎಂಬ ವಿಷಯದ ಕುರಿತು ಬುಧವಾರ ಮಾತನಾಡಿದರು.

ಗಂಭೀರ ವಿಷಯಗಳಿಗೆ ತಮಾಷೆಯ ಲೇಪವನ್ನು ಕೊಟ್ಟಾಗ ಅದನ್ನು ವಿವರಿಸುವುದು ಸುಲಭವಾಗುತ್ತದೆ. ಕೆಲವೊಮ್ಮೆ ಸುಳ್ಳು ಹೇಳುವುದು ಅನಿವಾರ್ಯ. ಆದರೆ ನಮ್ಮ ಸುಳ್ಳು ನಿರಪರಾಧಿಗಳ ಪ್ರಾಣಕ್ಕೆ ಕುತ್ತು ತರಬಾರದು. ನಾವಾಡಿದ ಸುಳ್ಳು ಹಾನಿಯನ್ನುಂಟು ಮಾಡಿದರೆ ಆ ವ್ಯಥೆ ನಮ್ಮನ್ನು ಜೀವನ ಪೂರ್ತಿ ಕಾಡುತ್ತದೆ. ಕತೆ ಪುರಾಣಗಳಲ್ಲಿಯೂ ಸಂದರ್ಭೋಚಿತ ಸುಳ್ಳುಗಳನ್ನು ಕಾಣಬಹುದಾಗಿದೆ ಎಂದು ತಮ್ಮ ಅನಿಸಿಕೆಯನ್ನು ಅಭಿವ್ಯಕ್ತ ಪಡಿಸಿದರು.

ವಿದ್ಯಾರ್ಥಿಗಳಾದ ಸೀಮಾ ಪೋನಡ್ಕ, ವರ್ಷಿತಾ ಮುಡೂರು, ಶಿವಪ್ರಸಾದ್ ರೈ, ಅಕ್ಷಯ ಕೃಷ್ಣ,  ಶಿವಶಂಕರ್ ಮಯ್ಯ, ಭವ್ಯ, ಮೇಘ, ಸಂಕೇತ್ ಕುಮಾರ್, ರಾಮ್ ಕಿಶನ್ ಮತ್ತು ಸವಿತಾ ತಮ್ಮ ಅನುಭವ ಹಂಚಿಕೊಂಡರು. ನೂತನವಾಗಿ ಆರಂಭಗೊಂಡ ಪತ್ರಿಕೋದ್ಯಮ ಸ್ನಾತ್ತಕೋತ್ತರ ವಿಭಾಗ ಎಂಸಿಜೆ ಗೆ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಪರಿಚಯಿಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ವಿಭಾಗ ಉಪನ್ಯಾಸಕಿ ಭವ್ಯ ಪಿ. ಆರ್ ನಿಡ್ಪಳ್ಳಿ, ಸುಶ್ಮಿತಾ, ಪೂಜಾ ಪಕ್ಕಳ, ಇತಿಹಾಸ ವಿಭಾಗದ ಉಪನ್ಯಾಸಕ ಪ್ರಮೋದ್ ಎಮ್.ಜಿ. ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ  ಸುಷ್ಮಾ ಎಂ.ಎಸ್ ಉಪಸ್ಥಿತರಿದ್ದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ವಿದ್ಯಾರ್ಥಿನಿ ಅರ್ಪಿತಾ ವಂದಿಸಿದರು. ಕವಿತಾ ಕಾರ್ಯಕ್ರಮ ನಿರೂಪಿಸಿದರು.