ಚಿತ್ರಗಳು ಇತಿಹಾಸಕ್ಕೆ ಸಾಕ್ಷಿಯಾಗುವ ಸಾಧನಗಳು : ಡಾ.ಶ್ರೀಧರ ಎಚ್.ಜಿ

ಪುತ್ತೂರು: ಚಿತ್ರಗಳು ಗತಕಾಲದ ಇತಿಹಾಸವನ್ನು ಕಣ್ಣಮುಂದೆ ತರಬಲ್ಲಂತಹ ಸಾಧನಗಳು. ಎಷ್ಟೋ ವರ್ಷಗಳ ನಂತರವೂ ಆಗಿ ಹೋದ ವಿಚಾರ, ಘಟನಾವಳಿಗಳನ್ನು ಚಿತ್ರಗಳ ಮೂಲಕ ಅರಿಯಬಹುದು. ಹಾಗಾಗಿ ಫೋಟೋಗ್ರಾಫರ್ ಆಗುವವನಿಗೆ ಅತ್ಯಂತ ಹೆಚ್ಚಿನ ಜವಾಬ್ಧಾರಿ ಹಾಗೂ ಬೇಡಿಕೆ ಸದಾ ಕಾಲ ಸಮಾಜದಲ್ಲಿದೆ. ಆದರೆ ತುಸು ಎಡವಿದರೂ ಪೋಟೋಗ್ರಾಫರ್ ಎಲ್ಲರಿಂದಲೂ ನಿಂದನೆಗೆ ಒಳಗಾಗಬೇಕಾಗುತ್ತದೆ ಅನ್ನುವುದನ್ನೂ ಮರೆಯಬಾರದು ಎಂದು ವಿವೇಕಾನಂದ ಕಾಲೇಜಿನ ನಯನ ಫೋಟೋಗ್ರಾಫಿಕ್ ಕ್ಲಬ್‌ನ ನಿರ್ದೇಶಕ ಡಾ.ಶ್ರೀಧರ ಎಚ್.ಜಿ. ಹೇಳಿದರು.

ಅವರು ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಸುದ್ದಿ ಚಿತ್ರಗಳು ಎಂಬ ವಿಷಯದ ಬಗೆಗೆ ಮಾತನಾಡಿದರು.

ಫೋಟೋ ತೆಗೆಯುವಾಗ ಫೋಟೋಗ್ರಾಫರ್‌ನ ಕಲ್ಪನೆ, ಮನಸ್ಥಿತಿ, ಆಲೋಚನಾ ಲಹರಿ ಎಲ್ಲವೂ ಚಿತ್ರದ ಮೇಲೆ ಪರಿಣಾಮ ಬೀರುತ್ತವೆ. ಹಿಂದೆಲ್ಲಾ ರೋಲ್ ಕ್ಯಾಮರಾದಲ್ಲಿ ತೆಗೆಯುತ್ತಿದ್ದ ಕಾಲ. ಆಗ ಈಗಿನಂತೆ ತೆಗೆದ ಚಿತ್ರಗಳನ್ನು ಆಗಾಗ ನೋಡುವ, ತಿದ್ದಿಕೊಳ್ಳುವ ಅವಕಾಶವೇ ಇರಲಿಲ್ಲ. ಕೆಲವೊಮ್ಮೆ ಪೂರ್ತಿ ರೋಲ್ ಮುಗಿದ ನಂತರ ಆ ಚಿತ್ರಗಳನ್ನು ಮಂಗಳೂರಿಗೆ ಕೊಂಡೊಯ್ದು ತೊಳೆಸುವ ಹೊತ್ತಿಗೆ ಚಿತ್ರವೇ ಬಂದಿಲ್ಲ ಎಂಬ ಆಘಾತಕಾರಿ ಸಂಗತಿಯೂ ಬಯಲಾಗುತ್ತಿತ್ತು. ಆದರೆ ಇಂದು ಫೋಟೋಗ್ರಫಿ ಸುಲಭ ಸಾಧ್ಯವೆನಿಸಿದೆ ಎಂದು ನೆನೆಪುಗಳನ್ನು ಮೆಲುಕು ಹಾಕಿದರು.

ಸುದ್ದಿ ಪತ್ರಿಕೆಗಳಿಗೆ ಕಳುಹಿಸುವಂತಹ ಫೋಟೋಗಳನ್ನು ತೆಗೆಯುವಾಗ ಕೆಲವೊಂದು ಮೂಲಭೂತ ಅಂಶಗಳ ಬಗೆಗೆ ಗಮನಹರಿಸಬೇಕು. ಪತ್ರಿಕೆಗಳಲ್ಲಿ ಯಾವ ತೆರನಾದ ಚಿತ್ರಗಳು ಪ್ರಕಟಗೊಳ್ಳುತ್ತವೆ ಹಾಗೂ ಎಂತಹ ಚಿತ್ರಗಳಿಗೆ ಅವಕಾಶ ಇಲ್ಲ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದರಲ್ಲೂ ಭಾಷಣದಂತಹ ಚಿತ್ರಗಳನ್ನು ತೆಗೆಯುವಾಗ ಯಾವ ದಿಕ್ಕಿನಿಂದ ತೆಗೆಯಬೇಕು, ಯಾವ ಸಂಗತಿಗಳು ಚಿತ್ರದಲ್ಲಿ ಕಾಣೀಸಿಕೊಳ್ಳಬೇಕು ಎಂಬ ಪೂರ್ವ ಯೋಚನೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಮಾತು ಆಡಿದರೆ, ಮುತ್ತು ಒಡೆದರೆ ಹೋಯಿತು ಎಂಬಂತೆ ಚಿತ್ರ ತೆಗೆದರೆ ಮುಗಿಯಿತು ಎನ್ನಬಹುದು. ಹಾಗಾಗಿ ತೆಗೆಯುವ ಚಿತ್ರದ ಬಗೆಗೆ ಅತ್ಯಂತ ಹೆಚ್ಚಿನ ಜಾಗರೂಕತೆ ಅಗತ್ಯ. ಅವಕಾಶಗಳು ಮತ್ತೆ ಮತ್ತೆ ಫೋಟೋಗ್ರಾಫರ್ ನ ಬಳಿ ಬರುವುದಿಲ್ಲ, ಬಂದ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳುವ ಕಲೆ ಆತನಿಗೆ ತಿಳಿದಿರಬೇಕು ಎಂದು ನುಡಿದರು.

ಎಂ.ಸಿ.ಜೆ ವಿಭಾಗದ ಉಪನ್ಯಾಸಕಿ ಪೂಜಾ ಪಕ್ಕಳ ಸ್ವಾಗತಿಸಿದರು. ಉಪನ್ಯಾಸಕಿ ಸುಶ್ಮಿತಾ ಜೆ ವಂದಿಸಿದರು. ಈ ಸಂದರ್ಭದಲ್ಲಿ ವಿಭಾಗದ ಹಾಗೂ ಎಂ.ಕಾಂ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು. ಪದವಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಶಿವಶಂಕರ ಮಯ್ಯ ಹಾಗೂ ಶಿವಪ್ರಸಾದ್ ರೈ ಪ್ರಾಯೋಗಿಕ ಸಂಗತಿಗಳನ್ನು ಪ್ರಸ್ತುತಪಡಿಸುವಲ್ಲಿ ಸಹಕರಿಸಿದರು.