ವಿವೇಕಾನಂದ ಕಾಲೇಜಿಗೆ ನ್ಯಾಕ್ ಭೇಟಿ, ವ್ಯವಸ್ಥೆ ಗುಣಮಟ್ಟದ ಬಗೆಗೆ ಮೆಚ್ಚುಗೆ

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿಗೆ ರಾಷ್ಟ್ರೀಯ ಪರಿಶೀಲನಾ ಸಮಿತಿಯಾದ ನ್ಯಾಕ್ ತಂಡ ಸೆ.8 ಹಾಗೂ 9 ರಂದು ಭೇಟಿ ನೀಡಿ ಶೈಕ್ಷಣಿಕ ಸಾಧನೆಗಳ ಪರಾಮರ್ಶೆ ನಡೆಸಿತು. ಪ್ರತಿ ಐದು ವರ್ಷಕ್ಕೊಮ್ಮೆ ಭೇಟಿ ನೀಡುವ ಈ ಪರಿಶೀಲನಾ ಸಮಿತಿ 2010-11ರಲ್ಲಿ ನಡೆದ ನ್ಯಾಕ್ ತಂಡದ ಭೇಟಿಯ ತರುವಾಯ ಕಾಲೇಜಿನಲ್ಲಾದ ಬದಲಾವಣೆ, ಬೆಳವಣಿಗೆ, ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳ ಗುಣಮಟ್ಟವನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿತು.

ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡದ ಮುಖ್ಯಸ್ಥರಾಗಿ ರಾಜಸ್ಥಾನದ ಮೋಹನ್ ಲಾಲ್ ಸುಖಾಡಿಯಾ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ.ಐ.ವಿ.ತ್ರಿವೇದಿ, ಮೆಂಬರ್ ಕಾರ್ಡಿನೇಟರ್ ಆಗಿ ಆಂಧ್ರ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ವಿಶ್ರಾಂತ ಪ್ರೊಫೆಸರ್ ಎಂ.ವಿ.ಪ್ರಸಾದ್ ರಾವ್ ಹಾಗೂ ಸದಸ್ಯರಾಗಿ ಗೋವಾದ ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಮೋಹನ್ ಎಂ ಸಂಗೋಡ್ಕರ್ ಕಾರ್ಯನಿರ್ವಹಸಿದರು.

ನ್ಯಾಕ್ ತಂಡದ ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ, ಹೆತ್ತವರೊಂದಿಗೆ ಮಾತ್ರವಲ್ಲದೆ ಹಿರಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಯಿತು. ಅಂತೆಯೇ ಕಾಲೇಜಿನ ಗ್ರಂಥಾಲಯ, ಸಂಶೋಧನಾ ಕೇಂದ್ರ, ಕ್ಯಾಂಟೀನ್ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವ ಸೌಲಭ್ಯಗಳು ಇತ್ಯಾದಿಗಳ ಬಗೆಗೆ ಸಮಗ್ರ ಅಧ್ಯಯನ ನಡೆಸಲಾಯಿತು. ಅಲ್ಲದೆ ಆಡಳಿತ ಮಂಡಳಿಯಿಂದ ದೊರಕುತ್ತಿರುವ ಬೆಂಬಲದ ಬಗೆಗೆ ವಿಮರ್ಶೆ ನಡೆಸಲಾಯಿತು.

ಎರಡು ದಿನಗಳ ಭೇಟಿಯ ಆರಂಭದಲ್ಲಿ ಮೊದಲಿಗೆ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರಿಂದ ಕಾಲೇಜಿನ ಸಮಗ್ರ ಮಾಹಿತಿಯನ್ನೊಳಗೊಂಡ ಪ್ರಸ್ತುತಿ ನಡೆದು ತದನಂತರ ಪ್ರತಿ ವಿಭಾಗದ ವತಿಯಿಂದ ಪ್ರಸ್ತುತಿ ನಡೆಯಿತು. ಆ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ದೊರಕಿದ್ದು ನ್ಯಾಕ್ ಸಮಿತಿಯ ಮೆಚ್ಚುಗೆಗೆ ಪಾತ್ರವಾಯಿತು. ಕಾಲೇಜಿನಲ್ಲಿ ಆರಂಭಿಸಲಾಗಿರುವ ಸ್ನಾತಕೋತ್ತರ ಕೇಂದ್ರ ಹಾಗ ಅದಕ್ಕಾಗಿ ಇರುವ ಮೂಲಭೂತ ಸೌಕರ್ಯಗಳ ಬಗೆಗೂ ಸಂತಸ ವ್ಯಕ್ತಪಡಿಸಿದರು.

ಎರಡು ದಿನಗಳ ಭೇಟಿಯ ಕೊನೆಯಲ್ಲಿ ಕಿರುವರದಿಯನ್ನು ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರಿಗೆ ಹಸ್ತಾಂತರಿಸಿದ ನ್ಯಾಕ್ ಸಮಿತಿಯ ಮುಖ್ಯಸ್ಥ ಪ್ರೊ.ಐ.ವಿ. ತ್ರಿವೇದಿ ಮಾತನಾಡಿ ವಿವೇಕಾನಂದ ಕಾಲೇಜಿನ ವಿವಿಧ ಸಂಗತಿಗಳು ನಮ್ಮನ್ನು ಚಕಿತಗೊಳಿಸಿವೆ. ಇಲ್ಲಿ ಸಾಕಷ್ಟು ಗುಣಾತ್ಮಕ ವಿಚಾರಗಳು ತುಂಬಿಕೊಂಡಿವೆ. ವಂದೇ ಮಾತರಂ ಪ್ರಾರ್ಥನೆಯಿಂದ ತೊಡಗಿ ಎನ್‌ಸಿಸಿ ವಿದ್ಯಾರ್ಥಿಗಳು ನೀಡಿದ ಗೌರವ ರಕ್ಷೆ, ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಇವೆಲ್ಲವೂ ಉತ್ಕೃಷ್ಟ ಮಟ್ಟದಲ್ಲಿದ್ದವು ಮಾತ್ರವಲ್ಲದೆ ಕೆಲವೊಂದು ವಿಶ್ವವಿದ್ಯಾನಿಲಯಗಳಲ್ಲೂ ಇಂತಹ ಗುಣಮಟ್ಟ ಕಂಡುಬರುವುದಿಲ್ಲ ಎಂದು ನುಡಿದರು.

ವಿವೇಕಾನಂದ ಕಾಲೇಜಿನಲ್ಲಿ ಸಾಕಷ್ಟು ಉತ್ಸಾಹಿ ಪ್ರಾಧ್ಯಾಪಕರಿರುವುದು ಗಮನಕ್ಕೆ ಬಂದಿದೆ. ಇಂತಹ ಪ್ರಾಧ್ಯಾಪಕರು ಇನ್ನಷ್ಟು ಸಂಶೊಧನಾ ಕಾರ್ಯಗಳಲ್ಲಿ ತೊಡಗಬೇಕು. ಇದರಿಂದಾಗಿ ವಿದ್ಯಾಥಿಗಳಿಗೆ ಅಧಿಕ ಪ್ರಯೋಜನಗಳು ದೊರಕುತ್ತವೆ. ಒಬ್ಬ ಉತ್ತಮ ಸಂಶೋಧಕ ಉತ್ತಮ ಅಧ್ಯಾಪಕನಾಗಬಲ್ಲ ಎಂಬ ಮಾತಿದೆ. ಆದ್ದರಿಂದ ಸಂಶೋಧನೆಗೆ ಆದ್ಯತೆ ಈಯಬೇಕು. ಅಂತೆಯೇ ವಿವೇಕಾನಂದ ಕಾಲೇಜಿನಲ್ಲಿ ಈಗಾಗಲೇ ಸಮೃದ್ಧ ಗ್ರಂಥಾಲಯವಿದೆ ಅನ್ನುವುದು ನಮ್ಮ ಗಮನಕ್ಕೆ ಬಂದಿದೆ. ಇನ್ನೂ ಅದನ್ನು ವಿಸ್ತರಿಸುವ ಸಾಧ್ಯತೆ ಖಂಡಿತವಾಗಿಯೂ ಈ ಸಂಸ್ಥೆಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಸಂಚಾಲಕ ಎಂ.ಟಿ.ಜಯರಾಮ ಭಟ್, ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್, ಸದಸ್ಯ ಮೋಹನ, ಕಾಲೇಜಿನ ನ್ಯಾಕ್ ಸಂಯೋಜಕ ಪ್ರೊ.ಶಂಕರನಾರಾಯಣ ಭಟ್, ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ, ಕಾಲೇಜಿನ ಐಕ್ಯುಎಸಿ (ಇಂಟರ್‌ನಲ್ ಕ್ವಾಲಿಟಿ ಅಸೆಸ್‌ಮೆಂಟ್ ಸೆಲ್) ಸಂಯೋಜಕ ಡಾ.ಶ್ರೀಧರ ಎಚ್.ಜಿ, ಕಾಲೇಜಿನ ವಿಶ್ರಾಂತ ಪ್ರಾಚಾರ್ಯರು, ಪ್ರಾಧ್ಯಾಪಕರು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕ, ಪ್ರಾಧ್ಯಾಪಕೇತರ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.