ಆಸಕ್ತಿ ಇರುವ ವಿಷಯದಲ್ಲೇ ಮಕ್ಕಳನ್ನು ತರಬೇತುಗೊಳಿಸಬೇಕು : ಸೇಡಿಯಾಪು ಜನಾರ್ಧನ ಭಟ್

ಪುತ್ತೂರು: ವಿವೇಕಾನಂದ ವಿದ್ಯಾ ಸಂಸ್ಥೆ  ಪಾಠದ ಜೊತೆಗೆ  ಸಾಮಾಜಿಕ  ಜಾಗೃತಿ, ಕ್ರೀಡೆ,  ಇಂತಹ  ಇತರೆ ಕ್ಷೇತ್ರಗಳ ಬಗ್ಗೆಯೂ  ಮಾಹಿತಿಗಳನ್ನು ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿ  ಆಸಕ್ತಿ ಇರುವ ವಿಷಯದಲ್ಲಿಯೇ ಅವರನ್ನು ಪರಿಣಿತ ಗೊಳಿಸುವುದು  ಕೂಡ  ಶಿಕ್ಷಣವೇ ಎಂದು  ವಿವೇಕಾನಂದ  ಕಾಲೇಜಿನ  ಕೋಶಾಧಿಕಾರಿ  ಸೇಡಿಯಾಪು ಜನಾರ್ಧನ ಭಟ್ ಹೇಳಿದರು.

ಅವರೂ ಕಾಲೇಜಿನ  ಸ್ನಾತ್ತಕೋತ್ತರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣದ ಜೊತೆಗೆ ವಂಶಪಾರಂಪರ್ಯವಾಗಿ ಬಂದಿರುವಂತಹ ಉದ್ಯೋಗದ ಕಡೆಗೂ ಒಲವು  ತೋರಿಸಬೇಕು. ಕಷ್ಟಕಾಲದಲ್ಲಿ  ಆ ಉದ್ಯೋಗಗಳೂ ನಮ್ಮ ನೆರವಿಗೆ ಬರುತ್ತವೆ. ಕೇವಲ ಆಧುನಿಕ ಉದ್ಯೋಗಗಳಿಗಷ್ಟೇ ನಮ್ಮ ಆದ್ಯತೆ ಇದ್ದರೆ ಎರಡನೇ ಸಾಧ್ಯತೆ ಇಲ್ಲವಾಗಿಬಿಡುತ್ತದೆ. ಹಾಗಾಗಿ ಕೃಷಿಯಂತಹ ಕ್ಷೇತ್ರಗಳೂ ಆದ್ಯತೆಯ ಭಾಗವೇ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವರ್ಷದಿಂದ ವರ್ಷಕ್ಕೆ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿಗೆ ಬೇಕಾದ ಉತ್ತಮ ದರ್ಜೆಯ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ಅತೀ ಮುಖ್ಯವಾದುದು. ಆತ್ಮ ಸ್ಥೈರ್ಯವನ್ನು ತುಂಬುವ ಕೆಲಸವನ್ನು ವಿವೇಕಾನಂದ ಕಾಲೇಜು ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಪೈ ಮಾತನಾಡಿ ವಿವೇಕಾನಂದ ವಿದ್ಯಾ ಸಂಸ್ಥೆ ಹಲವು ದಶಕಗಳಿಂದ ಉತ್ತಮ ದರ್ಜೆಯ ಶಿಕ್ಷಣವನ್ನು ನೀಡುತ್ತಿದೆ. ವ್ಯಕ್ತಿತ್ವ ವಿಕಸನ ಶಿಕ್ಷಣದ ಪ್ರಮುಖ ಉದ್ಧೇಶ. ವಿದ್ಯಾರ್ಥಿ ಜೀವನದಲ್ಲಿ ಸ್ನಾತಕೋತ್ತರ ವಿಭಾಗ ಕೊನೆಯ ಘಟ್ಟ. ಈ ಎರಡು ವರ್ಷದ ಅದ್ಯಯನ ಜೀವನದ ಪ್ರಮುಖ ತಿರುವು ಆಗಿದೆ. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ನಾವು ಕಲಿತಷ್ಟು ಕಲಿಕೆಗೆ ಕೊನೆಯಿಲ್ಲ ಎಂದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸಂಚಾಲಕ ಎಂ.ಟಿ ಜಯರಾಮ ಭಟ್ ಉಪಸ್ಥಿತರಿದ್ದರು.

ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ.ವಿಜಯ ಸರಸ್ವತಿ ಸ್ವಾಗತಿಸಿ, ಎಂ.ಕಾಂ ಉಪನ್ಯಾಸಕಿ ಅನನ್ಯ.ವಿ ನಿರೂಪಿಸಿದರು. ರಸಾಯನಶಾಸ್ತ್ರ ಎಂ.ಎಸ್.ಸಿ ವಿಭಾಗದ ಉಪನ್ಯಾಸಕ ಡಾ.ವಿಜಯ ಗಣಪತಿ ಕಾರಂತ್ ಧನ್ಯವಾದಗೈದರು.