ಶೈಕ್ಷಣಿಕ ಸಂಸ್ಥೆಯ ಅಭಿವೃದ್ಧಿಯಲ್ಲಿ ಹೆತ್ತವರ ಪಾತ್ರ ಗಣನೀಯ : ಶ್ರೀನಿವಾಸ ಪೈ

ಪುತ್ತೂರು: ಯಾವುದೇ ಕಾಲೇಜಿನ ಅಭಿವೃದ್ಧಿಯ ಹಿಂದೆ ರಕ್ಷಕ ಶಿಕ್ಷಕ ಸಂಘದ ಶ್ರಮ ಅಡಗಿದೆ. ಯಾವ ಸಂಸ್ಥೆಗೆ ರಕ್ಷಕ ಶಿಕ್ಷಕ ಸಂಘವು ನಿರಂತರವಾಗಿ ಒದಗುತ್ತಿರುವುದಲ್ಲದೆ ಅತ್ಯುತ್ತಮ ಮಾರ್ಗದರ್ಶನವನ್ನು ನೀಡುತ್ತದೆಯೋ ಅಂತಹ ಸಂಸ್ಥೆ ಸಹಜವಾಗಿಯೇ ಉನ್ನತಿಕೆಯನ್ನು ಕಾಣುವುದಕ್ಕೆ ಸಾಧ್ಯ. ವಿವೇಕಾನಂದ ಕಾಲೇಜು ಈ ಹಿನ್ನಲೆಯಲ್ಲಿ ಸಾಕಷ್ಟು ಪುಣ್ಯ ಮಾಡಿದೆ. ಹೆತ್ತವರು ಕಾಲೇಜಿನ ಬೆಳವಣಿಗೆಗೆ ನಿರಂತರವಾಗಿ ಕಾರಣರಾಗುತ್ತಿದ್ದಾರೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು.

ಅವರು ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುವುದರ ಬಗೆಗೆ ಇತ್ತೀಚೆಗೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡ ಶ್ಲಾಘಿಸಿದ್ದು, ಇಂತಹ ಅಪೂರ್ವ ವಿದ್ಯಾರ್ಥಿ ಸಮೂಹ ಕಾಲೇಜಿಗೆ ಹೆಮ್ಮೆ ತರುವಂತೆ ನಡೆದುಕೊಳ್ಳುತ್ತಿದೆ. ಇಡಿಯ ಕಾಲೇಜು ಉತ್ತಮ ರೀತಿಯಲ್ಲಿ ಮುನ್ನಡೆದುಕೊಂಡು ಹೋಗುತ್ತಿದೆ. ಹೆತ್ತವರು ಹೇಗೆ ಈ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳ ಗುಣ ನಡತೆಗಳು ಸಾರಿ ಹೇಳುತ್ತವೆ. ಈ ಸಂಸ್ಥೆಯ ಅಧ್ಯಾಪಕರ ಶ್ರಮವನ್ನೂ ಮರೆಯುವಂತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ವರಲಕ್ಷ್ಮೀ ವೈ ಮಾತನಾಡಿ ಇಂದು ಹೆತ್ತವರ ಮತ್ತು ಮಕ್ಕಳ ನಡುವಣ ಭಾವನಾತ್ಮಕ ಸಂಬಂಧ ಕಡಿಮೆಯಾಗುತ್ತಿದೆ. ಹಾಗಾಗಿಯೇ ಬ್ಲೂವೇಲ್‌ನಂತಹ ಆಘಾತಕಾರಿ ಜಾಲಕ್ಕೆ ಸಿಲುಕಿದಾಗಲೂ ಮಕ್ಕಳು ಹೆತ್ತವರೊಂದಿಗೆ ಹಂಚಿಕೊಳ್ಳಲಾಗದೆ ಆತ್ಮಹತ್ಯೆಯಂತಹ ಹೇಯಕೃತ್ಯಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಹೆತ್ತವರು ಮಕ್ಕಳಿಗಾಗಿ ನೀಡುವ ಸಮಯ ವ್ಯರ್ಥವಲ್ಲ, ಬದಲಾಗಿ ಸುಂದರ ಭವಿಷ್ಯದ ನಿರ್ಮಾಣಕ್ಕೆ ತಳಹದಿ ಎಂದು ಅಭಿಪ್ರಾಯಪಟ್ಟರು.

ಮಕ್ಕಳಿಗೆ ಅವರ ಓದಿನ ಜತೆಗೆ ಬೇರೆ ಬೇರೆ ಕಾರ್ಯಗಳಲ್ಲಿ ಆಸಕ್ತಿ ಮೂಡಿಸುವ ಜವಾಬ್ಧಾರಿ ಹೆತ್ತವರ ಮೇಲಿದೆ. ಅಧ್ಯಯನದ ಜತೆ ಜತೆಗೆ ಕೃಷಿ, ಹೊಲಿಗೆ ಹೀಗೆ ವಿವಿಧ ಕಾರ್ಯಗಳಲ್ಲಿ ಮಕ್ಕಳು ತೊಡಗುವಂತಾಗಬೇಕು. ರ್‍ಯಾಂಕ್ ಬದುಕಿನ ಉದ್ದೇಶವಾಗಬಾರದು ಎಂದರಲ್ಲದೆ ಇಂದು ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಜೋತು ಬೀಳುವುದನ್ನು ತಪ್ಪಿಸುವ ಹೊಣೆಗಾರಿಕೆ ಹೆತ್ತವರ ಮೇಲಿದೆ ಎಂದು ನುಡಿದರು.

ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಹೆತ್ತವರು ಸಭೆಯಲ್ಲಿ ಭಾಗವಹಿಸಿದ ನಂತರ ಆಯಾ ವಿಭಾಗಗಳ ಅಧ್ಯಾಪಕರುಗಳನ್ನು ಭೇಟಿಯಾಗಿ ಚರ್ಚಿಸುವುದೂ ಅತ್ಯಂತ ಅಗತ್ಯ. ಮಕ್ಕಳ ಬೆಳವಣಿಗೆಯ ಹಿನ್ನೆಲೆಯಲ್ಲಿ ಇದು ಸಹಕಾರಿ ಎಂದರು.

ಈ ಸಂದರ್ಭದಲ್ಲಿ ಪ್ರಸ್ತುತ ವರ್ಷದ ರಕ್ಷಕ ಶಿಕ್ಷಕ ಸಂಘಕ್ಕೆ ನೂತನವಾಗಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನಾರಾಯಣ ರಾವ್, ಮಧುರಕಾನ ಗಣಪತಿ ಭಟ್, ರಾಜಗೋಪಾಲ್ ಆನೆಮಜಲು, ಶಾಂತಾ ಆರ್, ಶ್ರೀದೇವಿ ಸುಳ್ಯ, ಗೋವಿಂದ ಭಟ್ ಹಾಗೂ ಲಿಲ್ಲಿ ಡಿಸೋಜ ಆಯ್ಕೆಯಾದರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಲ್ಲೊಬ್ಬರಾದ ಗುಣಪಾಲ ಜೈನ್, ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ ಭಟ್, ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷ ಈಶ್ವರ ಭಟ್, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಸಂಘದ ಕಾರ್ಯದರ್ಶಿ ಶ್ರೀಕೃಷ್ಣ ಗಣರಾಜ ಭಟ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಕೇಶವ ಪ್ರಸಾದ್ ಲೆಕ್ಕಪತ್ರ ಮಂಡಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ಸ್ವಾಗತಿಸಿ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ. ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ವಿಜಯ ಸರಸ್ವತಿ, ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಹರಿಣಿ ಪುತ್ತೂರಾಯ ಹಾಗೂ ಇಂಗ್ಲಿಷ್ ಉಪನ್ಯಾಸಕಿ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.