ಸಂಶೋಧಕನಿಗೆ ಶಿಶು ಸಹಜ ಕುತೂಹಲವಿರಬೇಕು : ಡಾ. ತಾಳ್ತಜೆ

ಪುತ್ತೂರು : ಮಗು ಪ್ರಶ್ನೆಗಳ ಮೂಲಕ ತನ್ನ ಕುತೂಹಲಗಳನ್ನು ತಣಿಸಿಕೊಳ್ಳುತ್ತದೆ. ಬೆಳೆಯುತ್ತಾ ಹೋದಂತೆ ಸ್ವಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಸಂಶೋಧಕನಾದವನಿಗೆ ಶಿಶು ಸಹಜ ಕುತೂಹಲವಿರಬೇಕು. ಅದರಿಂದ ವಿಷಯಗಳ ಬಗೆಗೆ ನಮಗೆ ಮೂಡುವ ಆಸಕ್ತಿ ನಮ್ಮನ್ನು ಸಂಶೋಧನಾ ಕಾರ್ಯಕ್ಕೆ ಪ್ರೇರೇಪಿಸುತ್ತದೆ ಎಂದು ಸಾಹಿತಿ, ಸಂಶೋಧಕ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.

         ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸಂಶೋಧನಾ ಮಾರ್ಗದರ್ಶನ ಕೇಂದ್ರ, ಇತಿಹಾಸ ಸಂಸೃತಿ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಹಾಗೂ ಕನ್ನಡ ಸಂಘ ಜಂಟಿಯಾಗಿ ಕಲಾ  ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದಮಾನವಿಕ ವಿಭಾಗಸಂಶೋಧನಾ ಅವಕಾಶ ಮಾಹಿತಿ ಕಾರ್ಯಾಗಾರಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

        ಸಂಶೋಧನೆ ಎಂದರೆ ಹೊಸದನ್ನು ಹುಡುಕುವುದು. ಒಂದು ವಿಷಯವನ್ನು ಅರ್ಥೈಸಿಕೊಳ್ಳಲು ಅನೇಕ ದೃಷ್ಟಿಕೋನಗಳಿರುತ್ತವೆ. ಆದುದರಿಂದ ಸಂಶೋಧಕನಿಗೆ ಅವಕಾಶಗಳು ಹೇರಳವಾಗಿವೆ. ಆದರೆ ವಿಷಯವನ್ನು ಆರಿಸಿಕೊಳ್ಳುವ ಜಾಣ್ಮೆ ನಮಗಿರಬೇಕು. ನಾವು ವಿಷಯಗಳನ್ನು ಸಂಗ್ರಹಿಸಲು ಸದಾ ಸಿದ್ಧರಾಗಿರಬೇಕು. ಯೋಚನೆಗಳಿಗೆ ತರೆದುಕೊಳ್ಳಲು ಮನೋಭೂಮಿಕೆ ಸನ್ನಧ್ಧವಾಗಿರಬೇಕು ಎಂದು ಕಿವಿಮಾತು ಹೇಳಿದರು.

        ಅಭ್ಯಾಸ ಪ್ರಬಂಧಗಳು ಸಂಶೋಧನೆಯ ಮೆಟ್ಟಿಲು. ಕೇವಲ ಮಾಹಿತಿ ಸಂಗ್ರಹಣೆ ಸಂಶೋಧನೆಯಾಗಲಾರದು. ವಿದ್ಯಾರ್ಥಿಗಳು ತೆರೆದ ಕಣ್ಣುಗಳುಳ್ಳವರಾಗಿರಬೇಕು. ವಿಷಯಗಳ ಗ್ರಹಿಸುವಿಕೆ, ಪರಾಮರ್ಶೆಗಳು ಮನಹೊಕ್ಕಾಗ ಹೊಸ ಸೃಷ್ಟಿ ನಮ್ಮಿಂದ ಸಾಧ್ಯ. ನಮ್ಮ ದಿನನಿತ್ಯದ ಅದೆಷ್ಟೋ ಆಚರಣೆ, ನಡವಳಿಕೆಗಳೇ ನಮಗೆ ಸಂಶೋಧನೆಗೆ ಬೇಕಾದ ಮೂಲಧಾತುವನ್ನು ನೀಡಬಹುದು ಎಂದು ನುಡಿದರು.

        ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಸಂಶೋಧನೆ ಎಂದರೆ ಅಂತರ್ಜಾಲದಿಂದ ಪಡೆದ ಮಾಹಿತಿಯ ನಕಲಲ್ಲ. ಅದು ಒಂದು ಮಾಹಿತಿ ಸಂಗ್ರಹಣೆಯ ದಾರಿ. ವಿದ್ಯಾರ್ಥಿ ಜೀವನದಲ್ಲಿ ಮಾಡುವ ಸಂಶೋಧನಾ ಪ್ರಬಂಧಗಳು ಭವಿಷ್ಯದಲ್ಲಿ ಸಹಾಯಕ್ಕೆ ಬರುತ್ತವೆ. ಕಾರ್ಯಯೋಜನೆಗಳಿಗಾಗಿ ಕಲಿಯುವ ಮಾಹಿತಿ ಸಂಗ್ರಹಣಾ ವಿಧಾನ, ಶೈಲಿ, ರಚನೆಗಳು ಸಂಶೋಧಕನಿಗಿರಬೇಕಾದ ಗುಣ ಹಾಗೂ ದೃಷ್ಟಿಕೋನವನ್ನು ಬೆಳೆಸುತ್ತದೆ ಎಂದರು.

        ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ವಿವೇಕಾನಂದ ಕಾಲೇಜು ಸಂಶೋಧನಾ ಮಾರ್ಗದರ್ಶನ ಕೇಂದ್ರದ ಸಂಚಾಲಕ ಡಾ. ಹೆಚ್.ಜಿ. ಶ್ರೀಧರ್  ಪ್ರಾಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು.