ದೈವಾರಾಧನೆ ಸರ್ವ ಜನಾಂಗದ ಸಮ್ಮಿಳಿತ : ಮನ್ಮಥ ಶೆಟ್ಟಿ

ಪುತ್ತೂರು: ದೈವಾರಾಧನೆ ಎಂಬುದು ತುಳುನಾಡಿನ ಪ್ರತಿ ಸಮುದಾಯದ ಭಾಗವಹಿಸುವಿಕೆಯನ್ನೂ ಒಳಗೊಂಡಿದೆ. ಇಲ್ಲಿ  ಜಾತಿ ಧರ್ಮ ಜನಾಂಗದ ಪ್ರಶ್ನೆ ಬರುವುದಿಲ್ಲ.  ಎಲ್ಲರೂ ಒಂದಾಗಿ ತಮಗಾಗಿ ಪರಂಪರೆ ಕಾಯ್ದಿರಿಸಿದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಎಂದು ಕೊಡಿಪ್ಪಾಡಿ ದೈವಾರಾಧನ ಕೂಟದ ಸಂಚಾಲಕ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗ, ಪಾರಂಪರಿಕ ಕೂಟ ಹಾಗೂ ತುಳು  ಸಂಘಗಳು ಜಂಟಿಯಾಗಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದೈವಾರಾಧನೆಯ ಕುರಿತು ಮಂಗಳವಾರ  ಮಾತನಾಡಿದರು.

ನಾಗಾರಾಧನೆಯೂ ಈ ತುಳುನಾಡಿನ ಆರಾಧನೆಗಳಲ್ಲಿ ಒಂದು. ನಾಗದೇವರ ಕಲ್ಲುಗಳಿಗೆ ಹಾಲೆರೆಯುವ ಮೂಲಕ ಆ ಹಾಲು ಕಡಲು ಸೇರಲಿಎಂದು ನಮ್ಮ ಹಿರಿಯರು ಕೇಳಿಕೊಳ್ಳುತ್ತಿದ್ದರು. ಅಂದರೆ ಅಷ್ಟು ಪ್ರಮಾಣದಲ್ಲಿ ಮಳೆ ಈ ಭೂಮಿಗೆ ಸೇರಲಿ, ಆಗ ನಮ್ಮ ಈ ನಾಡು ಸಮೃಧ್ಧಿಯನ್ನು ಹೊಂದುತ್ತದೆ ಎಂಬುದು ನಂಬಿಕೆ ಎಂದು ನುಡಿದರು.

ಪ್ರತಿ ದೈವಕ್ಕೂ ಅದರದೇ ಆದ ನಡಾವಳಿ, ಪಾಡ್ದನ ವೈಶಿಷ್ಟ್ಯ ಹಾಗೂ ಮಹತ್ವಗಳಿವೆ. ದೈವಾರಾಧನೆಗೆ ಬ್ರಹ್ಮಕಲಶವೆಂಬುದು ಇಲ್ಲ. ವಸ್ತು ವಿಷಯವೊಂದು ಅಳಿವಿನ ದಾರಿ ತಲುಪುತ್ತಿರುವುದನ್ನು ಸರಿದಾರಿಗೆ ತರುವುದಕ್ಕಾಗಿ ಈ ಬ್ರಹ್ಮಕಲಶ ನಡೆಸಲಾಗುತ್ತದೆ. ನಿಯಮದ ಪ್ರಕಾರ ನಡೆಯುವುದೇ ನೇಮ.. ದೈವಾರಾಧಾನೆಯ ಪ್ರತಿ ಕ್ಷೇತ್ರ, ಜಾಗ, ದೇವಸ್ಥಾನಗಳಲ್ಲಿ ಸತ್ಯ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಪ್ರಾಚೀನ ನಾಗರಿಕತೆಗಳೊಂದಿಗೆ ಸಂಪರ್ಕ ಹೊಂದಿದ್ದ ನಾಡು ತುಳುನಾಡು. ಅವುಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ತುಳು ಲಿಪಿ ಕಾಣಸಿಗುತ್ತದೆ. ಹಿಂದೆ ಈ ನಾಡಿನಲ್ಲಿ ಅಪರಾಧಗಳ ಸಂಖ್ಯೆ ತುಂಬಾ ಕಡಿಮೆಯಿತ್ತು. ದೈವ ದೇವರುಗಳ ಮೇಲಿನ ಜನರ ನಂಬಿಕೆ, ಆಚರಣೆಗಳು ಅಪರಾಧ ಪ್ರಂಪಚದಿಂದ ಅವರನ್ನು ಕಾಪಾಡಿತ್ತು. ಕಾಲ ಬದಲಾದಂತೆ ಆ ನಂಬಿಕೆ, ಆಚರಣೆಯ ವಿಧಾನವೂ ಬದಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ತುಳು ಸಂಘೊದ ಸಂಚಾಲಕ ಡಾ. ವಿಷ್ಣುಕುಮಾರ್, ಇತಿಹಾಸ ವಿಭಾಗದ ಉಪನ್ಯಾಸಕಿ ವಿಜಯಲಕ್ಷ್ಮೀ, ಉಪನ್ಯಾಸಕ ಪ್ರಮೋದ್ ಎಮ್. ಜಿ. ಪಾರಂಪರಿಕ ಕೂಟದ ಅಧ್ಯಕ್ಷ ಲತೇಶ್ ಉಪಸ್ಥಿರಿದ್ದರು.

ವಿದ್ಯಾರ್ಥಿನಿ ಪಲ್ಲವಿ ಪ್ರಾರ್ಥಿಸಿ, ಶಿಶಿರ್ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಕ್ ಪ್ರಾಸ್ತಾವಿಸಿ ವಿದ್ಯಾರ್ಥಿ ಅರುಣ್ ವಂದಿಸಿದರು. ನಿಶಾ ಕಾರ್ಯಕ್ರಮ ನಿರೂಪಿಸಿದರು.